ಮಾರ್ಚ್ 13ರಂದು ಅದ್ದೂರಿಯಾಗಿ ‘ಜೇಮ್ಸ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ನಡೆದಿರುವುದು ನಮಗೆಲ್ಲ ಗೊತ್ತಿರೋ ವಿಷಯ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಲ್ಲಿ ಭಾವುಕರಾಗದ ನಟ-ನಟಿಯರಿಲ್ಲ. ಅರ್ಧ ದಾರಿಯಲ್ಲೇ ಅಗಲಿಹೋದ ಅಪ್ಪುವನ್ನು ನೆನೆದು ಕಂಬನಿಮಿಡಿಯದ ಹೃದಯವೇ ಇಲ್ಲ ಎನ್ನಬಹುದು. ಇನ್ನು ಅವರ ಸ್ವಂತ ಮನೆಯವರ ಸ್ಥಿತಿ ವಿವರಿಸುವುದು ಕಷ್ಟಸಾಧ್ಯ. ವೇದಿಕೆ ಮೇಲೆ ಬಂದು ಮಾತನಾಡಿದ ಶಿವಣ್ಣ ರಾಘಣ್ಣ ಇರ್ವರೂ ಕಣ್ತುಂಬಿಕೊಂಡೆ ಕೆಳಗಿಳಿದರು.
ಅಪ್ಪುವಿನ ಬಗ್ಗೆ ಗದ್ಗದ ಕಂಠದಿಂದಲೇ ಮಾತನಾಡಿದ ಶಿವಣ್ಣ, “ಅಪ್ಪುವನ್ನು ‘ಪ್ರೇಮದ ಕಾಣಿಕೆ’ ಚಿತ್ರದಿಂದಲೂ ನೋಡಿಕೊಂಡೆ ಬಂದಿದ್ದೇವೆ. ಇಂದು ಅವನು ನಮ್ಮೊಂದಿಗಿಲ್ಲ ಎಂದು ನೆನಪಾದಾಗೆಲ್ಲ ದುಃಖವಾಗುತ್ತದೆ. ರಾಘು ಮಾತನಾಡುವುದು ಕೇಳಿದರೆ ದುಃಖ ಹೆಚ್ಚಾಗುತ್ತದೆ. ಇವರೆಲ್ಲರಿಗಿಂತ ವಯಸ್ಸಿನಲ್ಲಿ ಹಿರಿಯವ ನಾನು. ನನ್ನ ಕಣ್ಣೆದುರೇ ಅಪ್ಪುಗೆ ರಾಘುಗೆ ಹೀಗೆಲ್ಲ ಆಗೋದು ನೋಡಿದರೆ ಏನು ಮಾಡಬೇಕೋ ತಿಳಿಯೋದಿಲ್ಲ. ಅಪ್ಪಾಜಿ-ಅಮ್ಮ ಕೂಡ ನೂರು ವರ್ಷ ಬದುಕಬೇಕೆಂಬ ಆಸೆಯಿತ್ತು ನಮಗೆ, ಎಲ್ಲ ಮಕ್ಕಳ ಹಾಗೇ. ಆದರೀಗ ಅವರು ಇಲ್ಲ ಕಿರಿಯವನು ಇಲ್ಲ ಎಂದರೆ ಎದೆ ಚುಚ್ಚಿದಂತಾಗುತ್ತದೆ. ನಾನು, ರಾಘು, ಅಪ್ಪು, ಲಕ್ಷ್ಮಿ ಹಾಗು ಪೂರ್ಣಿಮಾ ಜೊತೆಯಲ್ಲೇ ಬೆಳೆದವರು. ಐವರಲ್ಲಿ ಒಬ್ಬರಿಲ್ಲದಿದ್ದರೂ ಸಹಿಸಲಾಗುವುದಿಲ್ಲ.” ಎಂದು ಭಾವುಕರಾಗಿ ನುಡಿದರು.
“ಅಪ್ಪು ಅಗಲಿಕೆ ಕನ್ನಡಿಗರಿಗಷ್ಟೇ ಅಲ್ಲದೇ, ಬಹುಪಾಲು ಭಾರತೀಯರಿಗೆ ಕಣ್ಣೀರು ಕೊಟ್ಟಿದೆ. ಅವನ ಕೀರ್ತಿ ಅಂತದ್ದು. ನಟನೆ-ಸಿನಿಮಾ ಮಾತ್ರವಲ್ಲದೆ ಅವನಿಂದಾದ ಸಮಾಜಸ್ನೇಹಿ ಕೆಲಸಗಳನ್ನು ಜನ ಇಂದಿಗೂ ನೆನೆಯುತ್ತಾರೆ. ಕಳೆದ ವಾರ ಶೂಟಿಂಗ್ ಸಲುವಾಗಿ ಕೃಷ್ಣಗಿರಿಗೆ ಹೋಗಿದ್ದೆವು, ಅಲ್ಲಿನ ಜನ ಅಪ್ಪು ಬಗ್ಗೆ ಮಾತನಾಡುವುದು ಕೇಳಿ, ಅವನನ್ನು ತಮ್ಮನಾಗಿ ಪಡೆದದ್ದಕ್ಕೆ ಹೆಮ್ಮೆ ಜಾಸ್ತಿಯಾಗುತ್ತದೆ” ಎನ್ನುತ್ತಾರೆ. ಜೇಮ್ಸ್ ಚಿತ್ರದ ಬಗ್ಗೆ ಮಾತನಾಡುತ್ತಾ, ” ಈ ಚಿತ್ರದಲ್ಲಿ ನಾನು ಅವನ ಜೊತೆ ನಟಿಸಿದ್ದೇನೆ, ಅವನಿಗೆ ಧ್ವನಿಯಾಗಿದ್ದೇನೆ. ಅಪ್ಪುವಿಗೆ ಧ್ವನಿಯಗಬೇಕೆಂದು ಕೇಳಿದಾಗ ಬಹಳ ದುಃಖವಾಗಿತ್ತು. ನಾವು ನಗುನಗುತ್ತಲೇ ನಮ್ಮ ಕೆಲಸಗಳನ್ನೆಲ್ಲ ಮಾಡುತ್ತೇವೆ, ಶೂಟಿಂಗ್ ನಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ದುಃಖ ನಮ್ಮನ್ನೆಂದು ಬಿಡುವುದೇ ಇಲ್ಲ” ಎಂದು ಭಾವುಕರಾದರು.