Karnataka Bhagya

ಕನ್ನಡದ ಸ್ವಂತ ಒಟಿಟಿ ‘ಟಾಕೀಸ್’, ಹೊಸ ಪ್ರಯತ್ನಕ್ಕೆ ಶಿವಣ್ಣನ ಶುಭಹಾರೈಕೆ.

ಕೊರೋನ ಎಂಬ ಒಂದು ಕಾಯಿಲೆಯಿಂದ ಎಷ್ಟು ಕೆಟ್ಟದಾಯಿತೋ, ಒಳ್ಳೆಯದಾಯಿತೋ ಅವರವರಿಗೆ ಗೊತ್ತು. ಆದರೆ ಕೊರೋನ ಉಂಟು ಮಾಡಿದ ಲಾಕ್ ಡೌನ್ ನಿಂದ ಹೊಸ ಬದಲಾವನೆಗಳೇ ಆಗಿವೆ. ಅದರಲ್ಲಿ ಒಂದು ಹೊಸ ಸಂಚಲನ ‘ಒಟಿಟಿ’. ಕೋರೋನ ಕಾಲದ ನಂತರ ಒಟಿಟಿ ಗಳಲ್ಲಿ ದೊಡ್ಡ ದೊಡ್ಡ ಬದಲಾವನೆಗಳೇ ಆಗಿವೆ. ಚಲನಚಿತ್ರಗಳು, ವೆಬ್ಸೀರೀಸ್ ಗಳು ಮುಂತಾದವು ನೇರವಾಗಿ ಒಟಿಟಿಯಲ್ಲೇ ಬಿಡುಗಡೆಯಗತೊಡಗಿವೆ. ಈಗ ಕನ್ನಡದ ಸ್ವಂತ ಒಟಿಟಿ ಸಂಸ್ಥೆಯೊಂದು ಆರಂಭವಾಗಿದೆ.

‘ಟಾಕೀಸ್’ ಎಂಬ ಈ ಹೊಸ ಒಟಿಟಿ ಕನ್ನಡದ ಕಲೆಗಳು ಹಾಗು ಕಲಾವಿದರಿಗಾಗಿಯೇ ಅಸ್ತಿತ್ವಕ್ಕೆ ಬಂದಿದೆ. ಮೊದಲು ತುಳು ಭಾಷೆಗೆ ಮಾತ್ರ ಸೀಮಿತವಾಗಿದ್ದ ಈ ಒಟಿಟಿಯನ್ನು ಇದರ ಮಾಲೀಕರೂ, ಸ್ವಯಂ ಪ್ರಭ ಸಂಸ್ಥೆಯವರೂ ಆದಂತಹ ರತ್ನಾಕರ್ ಕಾಮತ್ ಅವರು ಇದೀಗ ಇಡೀ ಕನ್ನಡದ ಕಲೆಗೆ ವಿಸ್ತರಿಸಿದ್ದಾರೆ. ಈ ಮೊದಲು ತುಳು ಕಿರುಚಿತ್ರ ಹಾಗು ಸಿನಿಮಾಗಳನ್ನು ಪ್ರಸಾರ ಮಾಡುತ್ತಿದ್ದ ‘ಟಾಕೀಸ್’ ಇನ್ನು ತನ್ನದೇ ಸ್ವಂತ ಕನ್ನಡದ ಕಂಟೆಂಟ್ ಗಳನ್ನು ನೋಡುಗರಿಗೆ ತಲುಪಿಸಲಿದೆ.

ವಿಜಯ್ ರಾಘವೇಂದ್ರ, ರಂಜನಿ ರಾಘವನ್, ವೈಷ್ಣವಿ ಗೌಡ, ಮಂಜು ಪಾವಗಡ, ಪ್ರಮೋದ್ ಶೆಟ್ಟಿ, ಹರೀಶ್ ರಾಜ್ ಮುಂತಾದವರನ್ನೊಳಗೊಂಡು ಸುಮಾರು 1200ಕ್ಕೂ ಹೆಚ್ಚು ಕಲಾವಿದರೂ, 700ಕ್ಕೂ ಹೆಚ್ಚಿನ ತಂತ್ರಜ್ಞರು ‘ಟಾಕೀಸ್’ನೊಂದಿಗೆ ಕೈ ಜೋಡಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ದಿನಗಳ ಪರಿಶ್ರಮದಿಂದ ಆರಂಭಗೊಂಡಿರೋ ಈ ಕನ್ನಡದ ಒಟಿಟಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಕನ್ನಡದ ಸಿನಿಮಾಗಳು ವೀಕ್ಷಣೆಗೆ ಸಿದ್ಧವಾಗಿವೆ. ಇದಷ್ಟೇ ಅಲ್ಲದೇ, ಭವಿಷ್ಯದಲ್ಲಿ ಹಲವಾರು ಕನ್ನಡದ ಸ್ವಂತ ಸಿನಿಮಾಗಳು, ವೆಬ್ ಸೀರೀಸ್ ಗಳನ್ನು ಹೊರತರುವ ಉದ್ದೇಶ ಈ ಸಂಸ್ಥೆಯದ್ದು. ಇದರಿಂದ ಅಸಂಖ್ಯ ಕನ್ನಡಿಗರಿಗೆ ಅವಕಾಶ ಸಿಗಲಿದೆ.

ಈ ‘ಟಾಕೀಸ್ ಕನ್ನಡ ಒಟಿಟಿ’ಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದವರು ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್. ಈ ಬಗೆಯ ಹೊಸ ಪ್ರಯತ್ನಗಳ ಬೆನ್ನು ತಟ್ಟಲು ಸದಾ ಸಿದ್ದವಿರುವ ಇವರು ‘ಟಾಕೀಸ್’ನ ಬಗೆಗೆ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. “ಕನ್ನಡಿಗರ ಒಳಿತಿಗಾಗಿ ಈ ಕನ್ನಡಿಗರ ಸ್ವಂತ ಒಟಿಟಿ ಆರಂಭವಾಗಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗವಕಾಶ ಸಿಗುತ್ತದೆ. ಈ ಅವಕಾಶವನ್ನು ನಮ್ಮ ಕನ್ನಡದ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಬಳಸಿಕೊಳ್ಳಬೇಕು. ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳು ಹೊಸ ಹೊಸ ರೀತಿಯ ಮನೋರಂಜನ ಕಾರ್ಯಕ್ರಮಗಳು ಬರಬೇಕು. ಕಥೆಯನ್ನ ಒಪ್ಪದಿದ್ದರೆ? ಎಂಬ ಭಯವಿಲ್ಲದೆ ಬಂದು ಕಥೆ ಹೇಳಿ. ಉತ್ತಮ ಅಂಶಗಳಿದ್ದರೆ ನಿಮ್ಮ ಕಥೆ ಒಂದು ಸಂಚಾಲನವನ್ನೇ ಮೂಡಿಸಬಹುದು. ಅದರಿಂದ ಕನ್ನಡ ಭಾಷೆ ಬೆಳೆಯುತ್ತದೆ. ಈ ಒಟಿಟಿ ಬೇರೆ ಭಾಷೆಯ ಒಟಿಟಿ ಗಳಿಗೆ ಕಡಿಮೆಯಿಲ್ಲದಂತೆ ಬೆಳೆಯುತ್ತದೆ ಎಂಬ ನಂಬಿಕೆ ನನ್ನಲ್ಲಿದೆ. ಈ ಪ್ರಯತ್ನಕ್ಕಾಗಿ ನಾನು ರತ್ನಾಕರ್ ಕಾಮತ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.

ಇದೇ ಟಾಕೀಸ್ ನಲ್ಲಿ ಬರಲಿರುವ ಹೊಸ ವೆಬ್ ಸೀರೀಸ್ ಒಂದರಲ್ಲಿ ಶಿವಣ್ಣ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಶಿವಣ್ಣನವರ ಸ್ವಂತ ಬ್ಯಾನರ್ ಅಡಿಯಲ್ಲಿ ಅವರ ಪುತ್ರಿ ನಿರ್ಮಿಸುತ್ತಿರುವ ವೆಬ್ ಸೀರೀಸ್ ಒಂದರಲ್ಲಿ ಶಿವಣ್ಣ ವಿಶೇಷ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗೆಗಿನ ಅಧಿಕೃತ ಮಾಹಿತಿ ಇನ್ನು ಎಲ್ಲೂ ಲಭ್ಯವಾಗಿಲ್ಲ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap