ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ದುಃಖದ ನಡುವೆಯೂ ನಟ ಶಿವರಾಜಕುಮಾರ್ ನಿಧಾನಕ್ಕೆ ಕೆಲಸಕ್ಕೆ ಮರಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಭಜರಂಗಿ-2 ಸಿನಿಮಾವನ್ನು ಶಿವರಾಜ್ ಕುಮಾರ್ ಭಾನುವಾರ ಅನುಪಮಾ ಚಿತ್ರಮಂದಿರಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದರು.
ಹರ್ಷ ನಿರ್ದೇಶನದ ಸಿನಿಮಾವನ್ನು ಜಯಣ್ಣ ಫಿಲ್ಮ್ಸ್ ನಿರ್ಮಾಣ ಮಾಡಿತ್ತು. ಅಕ್ಟೋಬರ್ 29 ರಂದು ಸಿನಿಮಾ ರಿಲೀಸ್ ಆಗಿತ್ತು, ಆದರೆ ಅದೇ ದಿನ ಪುನೀತ್ ಅಕಾಲಿಕ ಮರಣಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಇದೀಗ ಶಿವಣ್ಣ ತಮ್ಮ 125ನೇ ಸಿನಿಮಾವನ್ನು ನವೆಂಬರ್ 21 ರಂದು ಸರಳ ಮುಹೂರ್ತದೊಂದಿಗೆ ಪ್ರಾರಂಭಿಸಲಿದ್ದಾರೆ.
ವೇದ ಎಂಬ ಟೈಟಲ್ ಹೊಂದಿರುವ ಈ ಸಿನಮಾಗೆ ‘ದಿ ಬ್ರೂಟಲ್ 1960s’ ಎಂಬ ಅಡಿಬರಹವಿದೆ. ಈ ಚಿತ್ರವು ಶಿವರಾಜಕುಮಾರ್ ಅವರ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್‌ನ ಮೊದಲ ಸಿನಿಮವಾಗಿದೆ. ವೇದ 1960 ರ ದಶಕದಲ್ಲಿ ನಡೆಯುವ ಗ್ರಾಮೀಣ ಭಾಗದ ಕಥೆ ಹೊಂದಿರುವ ಚಿತ್ರ ಎಂದು ಹೇಳಲಾಗುತ್ತದೆ. ಈ ಹಿಂದೆ ವಜ್ರಕಾಯ, ಭಜರಂಗಿ, ಭಜರಂಗಿ 2 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಶಿವಣ್ಣ ಮತ್ತು ಹರ್ಷ ನಾಲ್ಕನೇ ಬಾರಿಗೆ ಕೈ ಜೋಡಿಸಲಿದ್ದಾರೆ.