ಲೂಸಿಯಾ ಸಿನಿಮಾದ ಶ್ವೇತಾ ಆಗಿ ಚಂದನವನಕ್ಕೆ ಕಾಲಿಟ್ಟ ಶ್ರುತಿ ಹರಿಹರನ್ ಮನೋಜ್ಞ ನಟನೆಯ ಮೂಲಕ ಮನೆ ಮಾತಾದಾಕೆ. ಮಲಯಾಳಂ ಸಿನಿಮಾ “ಸಿನಿಮಾ ಕಂಪೆನಿ” ಯಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಬ್ಯೂಟಿಫುಲ್ ಮನಸ್ಸಿನ ಹುಡುಗಿ ಮತ್ತೆ ತಿರುಗಿ ನೋಡಿದ್ದೇ ಇಲ್ಲ.
ಕನ್ನಡದ ಜೊತೆಗೆ ತಮಿಳು, ಮಲಯಾಳಂ ಸಿನಿ ರಂಗದಲ್ಲಿ ನಟನಾ ಛಾಪನ್ನು ಪಸರಿಸಿರುವ ಶ್ರುತಿ ಹರಿಹರನ್ ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರವಾದರೂ, ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಗೆದ್ದರು.
ಸ್ಟಾರ್ ನಟರುಗಳ ಜೊತೆಗೆ ತೆರೆ ಹಂಚಿಕೊಂಡು ಸೈ ಎನಿಸಿಕೊಂಡಿದ್ದ ಶ್ರುತಿ ಮಗಳು ಜಾನಕಿಯ ಸಲುವಾಗಿ ನಟನೆಗೆ ಬ್ರೇಕ್ ಹಾಕಿದ್ದರು. ಮುದ್ದು ಮಗಳು ಜಾನಕಿಯ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದ ಶ್ರುತಿ ತಾಯ್ತನದ ಸವಿಯನ್ನು ಅನುಭವಿಸುವ ಸಲುವಾಗಿ ನಟನೆಗೆ ವಿದಾಯ ಹೇಳಿದ್ದರು.
ಇದೀಗ ಮತ್ತೆ ನಟನಾ ಜಗತ್ತಿಗೆ ಶ್ರುತಿ ಹರಿಹರನ್ ಕಂ ಬ್ಯಾಕ್ ಆಗಿದ್ದು ಕನ್ನಡದ ಜೊತೆಗೆ ಪರಭಾಷೆಯ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಸಾಲಗಾರ ಹಾಗೂ ಸ್ಟ್ರಾಬೆರಿ ಸಿನಿಮಾದಲ್ಲಿ ಶ್ರುತಿ ನಟಿಸುತ್ತಿದ್ದು ಶೂಟಿಂಗ್ ಕೂಡಾ ಮುಗಿದಿದೆ. ಇನ್ನು ಇದರ ಜೊತೆಗೆ ಡಾಲಿ ಖ್ಯಾತಿಯ ಧನಂಜಯ್ ಮುಖ್ಯ ಭೂಮಿಕೆಯಲ್ಲಿರುವ ಹೆಡ್ ಬುಷ್ ನಲ್ಲಿಯೂ ಈಕೆ ಬಣ್ಣ ಹಚ್ಚಿದ್ದಾರೆ.
ಏಜೆಂಟ್ ಕನ್ನಾಯಿರಾಮ್ ಎನ್ನುವ ತಮಿಳು ಸಿನಿಮಾದಲ್ಲಿ ಶ್ರುತಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಶಂಕರ್ ಎನ್ ಸೊಂಡೂರ್ ಅವರ ನಿರ್ದೇಶನದ ಹೊಸ ಸಿನಿಮಾಕ್ಕೆ ನಾಯಕಿ ಶ್ರುತಿ ಎಂಬುದನ್ನು ಅವರು ಈಗಾಗಲೇ ಘೋಷಿಸಿದ್ದಾರೆ. ಒಟ್ಟಿನಲ್ಲಿ ಕೊಂಚ ಗ್ಯಾಪ್ ನ ನಂತರ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಶ್ರುತಿ ಹರಿಹರನ್ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವುದು ಸಿನಿಪ್ರಿಯರಿಗೂ ಸಂತಸ ತಂದಿದೆ.