ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯ ನಾಯಕ ಲಕ್ಕಿ ಆಲಿಯಾಸ್ ಲಕ್ಷ್ಮಣ್ ಆಗಿ ಅಭಿನಯಿಸುತ್ತಿದ್ದ ಭರತ್ ಬೋಪಣ್ಣ ಇದೀಗ ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಾದಂಬರಿ ಆಧಾರಿತ ಚಿತ್ರ ‘ಚಿಕ್ಕಿಯ ಮೂಗುತಿ” ಸಿನಿಮಾಗೆ ಭರತ್ ಬೋಪಣ್ಣ ಸಹಿ ಹಾಕಿದ್ದಾರೆ.
ದೇವಿಕಾ ಜಾನಿತ್ರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಗ್ಗೆ ಮಾತನಾಡಿದ ಭರತ್ “ನಾನು ಸ್ಟೈಲಿಶ್ ಮತ್ತು ಭಾವೋದ್ರಿಕ್ತ ವನ್ಯಜೀವಿ ಛಾಯಾಗ್ರಾಹಕ ಜೋಸೆಫ್ ನ ಪಾತ್ರವನ್ನು ಮಾಡುತ್ತಿದ್ದೇನೆ. ತನ್ನ ಕೆಲಸಕ್ಕಾಗಿ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧನಾಗಿರುವ ಪಾತ್ರವದು. ಇನ್ನು ಮುಖ್ಯವಾಗಿ ಸಿನಿಮಾದಲ್ಲಿ ನನಗೆ ನೀಡಿದ ವೇಷಭೂಷಣಗಳಿಂದ ನಾನು ನಿಜವಾಗಿಯೂ ತುಂಬಾ ಪ್ರಭಾವಿತನಾಗಿದ್ದೇನೆ” ಎಂದಿದ್ದಾರೆ.
ಆಕಾಂಕ್ಷಾ ಪಟ್ಟಮಕ್ಕಿಗೆ ಜೋಡಿಯಾಗಿ ನಟಿಸಲಿರುವ ಭರತ್ ಚಿತ್ರದ ಕುರಿತಂತೆ ಮಾತನಾಡಿ “ನಾನು ಮೊದಲ ಬಾರಿಗೆ ಕಾದಂಬರಿ ಆಧಾರಿತ ಚಲನಚಿತ್ರವನ್ನು ಮಾಡುತ್ತಿದ್ದೇನೆ. ಇದು ಸಾಹಿತ್ಯದ ಕೃತಿಯನ್ನು ಆಧರಿಸಿದೆಯಾದರೂ, ಇದು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವ ವಾಣಿಜ್ಯ ಸ್ಪರ್ಶವನ್ನು ಹೊಂದಿದೆ. ಪಾತ್ರಕ್ಕೆ ಹೊಂದಿಕೆಯಾಗುವಂತೆ ಕಾದಂಬರಿಯನ್ನು ಸಹ ಓದಿದ್ದೇನೆ” ಎಂದಿದ್ದಾರೆ.
“ಚಿಕ್ಕಿಯ ಮುಗೂತಿಯು ಪ್ರೇಮವನ್ನು ಅದರ ಶುದ್ಧ ರೂಪದಲ್ಲಿ ಪ್ರದರ್ಶಿಸುವ ರೊಮ್ಯಾಂಟಿಕ್ ಕಥೆಯನ್ನು ಹೊಂದಿದೆ. ನಾವು ಪ್ರಮುಖ ಭಾಗಗಳನ್ನು ವಿದೇಶದಲ್ಲಿಯೂ ಶೂಟ್ ಮಾಡಲು ಯೋಜನೆ ನಡೆಸಿದ್ದೇವೆ. ಸಂದೇಶವನ್ನು ನೀಡುವ ಚಲನಚಿತ್ರವನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಖಂಡಿತವಾಗಿಯೂ ರಾಜಿ ಮಾಡಿಕೊಳ್ಳುತ್ತಿಲ್ಲ” ಎಂದಿದ್ದಾರೆ ಭರತ್ ಬೋಪಣ್ಣ