ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಖಳನಾಯಕಿ ಶ್ವೇತಾ ಗೆಳೆಯ ಪ್ರಖ್ಯಾತ್ ಆಗಿ ಅಭಿನಯಿಸುತ್ತಿರುವ ಅನಿರುದ್ಧ್ ವೇದಾಂತಿ ಖಳನಾಯಕನಾಗಿ ಅಬ್ಬರಿಸುತ್ತಿದ್ದಾರೆ. ಶ್ವೇತಾಳ ಆದೇಶದಂತೆ ಕೆಲಸ ಮಾಡುವ ಪ್ರಖ್ಯಾತ್ ಪಾತ್ರ ಧಾರಾವಾಹಿಯುದ್ದಕ್ಕೂ ಇರಲಿದೆಯಾ ಅಥವಾ ಕೇವಲ ಅದು ಅತಿಥಿ ಪಾತ್ರವೋ ಎಂಬುದು ತಿಳಿಯಬೇಕಾಗಿದೆ.

ಸತತ ಮೂರನೇ ಬಾರಿ ಖಳನಾಯಕ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಅನಿರುದ್ಧ್ “ನೆಗಟಿವ್ ರೋಲ್ ಮಾಡವುದಕ್ಕೆ ನಿಜಕ್ಕೂ ಒಂದು ರೀತಿಯ ಖುಷಿ. ಮುಖ್ಯವಾಗಿ ನೆಗೆಟಿವ್ ಪಾತ್ರ ನೋಡಿದ ವೀಕ್ಷಕರು ಯಾಕೆ ನಾಯಕ ನಾಯಕಿಗೆ ಕಷ್ಟ ಕೊಡ್ತೀರಾ ಎಂದು ಕೇಳಿದಾಗ ನಾವು ಮಾಡಿದ ಪಾತ್ರ ಜನಕ್ಕೆ ಹತ್ತಿರವಾಗಿದೆ ಎಂದೆನಿಸಿ ಬಿಡುತ್ತದೆ. ಇನ್ನು ನೆಗೆಟಿವ್ ಪಾತ್ರದಲ್ಲಿ ನಟನೆಗೆ ಅವಕಾಶ ಜಾಸ್ತಿ. ನಟನ ಹೊರತಾಗಿ ವಿಲನ್ ಎನ್ನುವ ಟೈಟಲ್ ಕೂಡಾ ಸಿಗುತ್ತೆ” ಎನ್ನುತ್ತಾರೆ.


ಮಹಾನಗರಿ ಬೆಂಗಳೂರಿನ ಚಾಮರಾಜಪೇಟೆಯ ಹುಡುಗ ಅನಿರುದ್ಧ್ ಗೆ ಚಿಕ್ಕ ವಯಸ್ಸಿನಿಂದಲೂ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮಹಾದಾಸೆ. ರಂಗಭೂಮಿಯ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ಅನಿರುದ್ಧ್ ನೂರೊಂದು ಸುಳ್ಳು ಧಾರಾವಾಹಿಯ ಮೂಲಕ ಕಿರುತೆರೆಗೆ ಹಾರಿದರು. ಮುಂದೆ ವಿನು ಬಳಂಜ ನಿರ್ದೇಶನದ ನಿನ್ನೊಲುಮೆಯಿಂದಲೇ ಧಾರಾವಾಹಿಯಲ್ಲಿ ಹಿರಿಮಗನಾಗಿ ಕಾಣಿಸಿಕೊಂಡರು.

ನಂತರ ಪ್ರೀತಂ ಶೆಟ್ಟಿ ನಿರ್ದೇಶನದ ಮೀರಾ ಮಾಧವ ಧಾರಾವಾಹಿಯಲ್ಲಿ ಎರಡನೇ ಪ್ರಮುಖ ಪಾತ್ರ ಪ್ರಶಾಂತ್ ಆಗಿ ನಟಿಸಿದರು. ಯಶೋಧೆ, ಅಮ್ಮ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅನಿರುದ್ಧ್ ವೇದಾಂತಿ ಮೊದಲ ಬಾರಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡದ್ದು ಗೃಹಲಕ್ಷ್ಮಿ ಧಾರಾವಾಹಿಯಲ್ಲಿ.

ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ಖಳನಾಯಕ ಆಗಿ ಮೋಡಿ ಮಾಡಿದ್ದ ಅನಿರುದ್ಧ್ ಬಯಸದೇ ಬಳಿ ಬಂದೆ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಮತ್ತೆ ಪ್ರಖ್ಯಾತ್ ಆಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಅನಿರುದ್ಧ್ ರಂಗಭೂಮಿ ಕಲಾವಿದ ಎಂಬುದು ಹಲವರಿಗೆ ತಿಳಿದಿಲ್ಲ.

ಜಿ.ಬಿ.ಕೋಟೆಯವರ ಚಿಲಿಪಿಲಿ ತಂಡಕ್ಕೆ ಸೇರಿದ ಅನಿರುದ್ಧ್ ಅವರು ನಟಿಸಿದ ನಾಟಕಗಳಿಗೆ ಲೆಕ್ಕವಿಲ್ಲ. ಆರಂಭದಲ್ಲಿ ಫ್ಯಾಂಟಸಿ ಪಾತ್ರಗಳಲ್ಲಷ್ಟೇ ನಟಿಸಿದ ಅನಿರುದ್ಧ್ ತದ ನಂತರ ಯಾವುದೇ ಪಾತ್ರ ನೀಡಿದರೂ ನಿರಾಂತಕವಾಗಿ ಮಾಡುವಷ್ಟು ರಂಗಭೂಮಿಯಲ್ಲಿ ಪಳಗಿದರು.

ಇದ್ದಂತೆ ಇರುವುದು ಲೇಸು ನಾಟಕದ ಗಾಳಿರಾಯನ ಪಾತ್ರ, ತುಕ್ಕೋಜಿ ಬುಕೋಜಿ ನಾಟಕದಲ್ಲಿ ಕಟ್ಟೆ ಭೂತು ಪಾತ್ರಗಳಿಗೆ ಜೀವ ನೀಡಿದ ಅನಿರುದ್ಧ್ ರಂಗಸೌರಭ ಮತ್ತು ನವೋದಯ ಎಂಬ ನಾಟಕ ತಂಡಗಳಲ್ಲಿ ಗುರುತಿಸಿಕೊಂಡ ಪ್ರತಿಭೆ.

ಹಲಗಲಿ ಬೇಡರ ದಂಗೆ, ಊರು ಭಂಗ, ಮೈಸೂರು ಮಲ್ಲಿಗೆ, ಗಂಗಾವತರಣ, ಶಸ್ತ್ರ ಪರ್ವ, ಅನ್ನಾವತಾರ,ರೋಮಿಯೋ ಲವ್ಸ್ ಅನಾರ್ಕಲಿ, ಸಿಂಹಾಸಚಲಂ ಸಂಪಿಗೆ ಮುಂತಾದ ನಾಟಕಗಳಲ್ಲಿ ನಟಿಸಿರುವ ಇವರು
ಕೊನೆ ಪುಟ ಮತ್ತು ಸತ್ವ ಎಂಬ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜಿಂದಾ ಮತ್ತು ಟೋರಾ ಟೋರಾ, ಹಾಸ್ಟೆಲ್ ಹುಡುಗರು ಸಿನಿಮಾಗಳಲ್ಲಿ ಅಭಿನಯಿಸಿರುವ ಅನಿರುದ್ಧ್ ಅವರು ಲಕ್ಷಣದ ಮೂಲಕ ಕಂ ಬ್ಯಾಕ್ ಆಗಿರುವುದು ಕಿರುತೆರೆ ವೀಕ್ಷಕರಿಗೆ ಸಂತಸ ತಂದಿದೆ.
