ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ನಾಯಕಿ ಶಿವಾನಿಯಾಗಿ ಅಭಿನಯಿಸುತ್ತಿರುವ ನಮೃತಾ ಗೌಡ ತನ್ನ ಧಾರಾವಾಹಿಯ ತಾಂತ್ರಿಕ ವರ್ಗವನ್ನು ಹೊಗಳಿದ್ದಾರೆ. ಶೂಟಿಂಗ್ ಶೆಡ್ಯೂಲ್ ನಲ್ಲಿ ಕ್ಯಾಮೆರಾ ವರ್ಗದ ಹಿಂದೆ ದುಡಿಯುವವರಿಗಾಗಿ ವಿಶೇಷ ಪ್ರಶಂಸೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.
ನಮೃತಾ ಗೌಡ ಧಾರಾವಾಹಿಯ ತಾಂತ್ರಿಕ ವರ್ಗದವರನ್ನು ಒಳಗೊಂಡ ವಿಡಿಯೋ ಶೇರ್ ಮಾಡಿಕೊಂಡಿದ್ದು ಈ ವಿಡಿಯೋವು ಅತ್ಯುತ್ತಮ ಶಾಟ್ ಬರಲು ಕ್ಯಾಮೆರಾ ಹಿಂದೆ ತಾಂತ್ರಿಕ ವರ್ಗದವರು ಹೇಗೆ ಕಷ್ಟಪಡುತ್ತಾರೆ ಎಂಬುದರ ಕುರಿತಾಗಿ ಇದೆ. ಲೈಟ್ ಮ್ಯಾನ್ ನಿಂದ ಕ್ಯಾಮೆರಾ ಮ್ಯಾನ್, ಪ್ರೊಡಕ್ಷನ್ ಬಾಯ್ಸ್ ಹಾಗೂ ನಿರ್ದೇಶಕವರೆಗೆ ನಮ್ರತಾ ಪ್ರತಿಯೊಬ್ಬರನ್ನು ಹೊಗಳಿದ್ದಾರೆ.
ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಹಿಮ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ನಮೃತಾ ಗೌಡ ತಕಧಿಮಿತ ಶೋನಲ್ಲಿ ತನ್ನ ಡ್ಯಾನ್ಸ್ ಮೂಲಕ ರಂಜಿಸಿದ್ದರು. ನಾಗಿಣಿ 2 ಮೂಲಕ ಕಿರುತೆರೆಗೆ ಮರಳಿದ ಆಕೆ ತನ್ನ ಪಾತ್ರದ ಕುರಿತು ಈ ಹಿಂದೆ ಹೇಳಿದ್ದರು. “ನಾನು ದ್ವಿಪಾತ್ರದಲ್ಲಿ ನಟಿಸುತ್ತಿರುವ ಕಾರಣ ಭಾಷೆ ನನಗೆ ಸವಾಲಾಗಿತ್ತು. ನಾನು ಶುದ್ದ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಇದು ಸ್ವಲ್ಪ ಹಳೆಗನ್ನಡವನ್ನು ಹೊಂದಿದೆ” ಎಂದಿದ್ದರು.