ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಲಕ್ಷಣದಲ್ಲಿ ಖಳನಾಯಕಿ ಶ್ವೇತಾಳ ಪರ್ಸನಲ್ ಅಸಿಸ್ಟೆಂಟ್ ಮಿಲಿ ಆಗಿ ನಟಿಸುತ್ತಿರುವ ಶ್ರುತಿ ರಮೇಶ್ ಚಿಕ್ಕಮಗಳೂರಿನ ತರೀಕೆರೆ ಕುವರಿ. ಇಂಜಿನಿಯರಿಂಗ್ ಪದವಿ ಪಡೆದು ಸದ್ಯ ಕಿರುತೆರೆಯಲ್ಲಿ ಬದುಕು ರೂಪಿಸಿಕೊಂಡಿರುವ ಶ್ರುತಿ ರಮೇಶ್ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು ಹಾಸ್ಯ ಕಲಾವಿದೆಯಾಗಿ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ ಪಾಪಾ ಪಾಂಡು ಸೀಸನ್ 2 ರಲ್ಲಿ ನಿಮ್ಮಿ ಆಗಿ ನಟಿಸಿ ಸೀರಿಯಲ್ ಲೋಕದಲ್ಲಿ ಮನೆ ಮಾತಾಗಿರುವ ಶ್ರುತಿ ಅವರನ್ನು ಜನ ಇಂದಿಗೂ ಆ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಹೌದು, ಪಾಪಾ ಪಾಂಡು ಸೀಸನ್ 2 ಮುಗಿದು ವರ್ಷಗಳಾಗುತ್ತಾ ಬಂದರೂ ಶ್ರುತಿ ರಮೇಶ್ ಹೆಸರು ಕೇಳಿದ ಕೂಡಲೇ ನೆನಪಾಗುವುದು ನಿಮ್ಮಿ ಪಾತ್ರ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯಂ ಶಿವಂ ಸುಂದರಂ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮೀ ಸಂಸಾರ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ, ಸ್ಟಾರ್ ಸುವರ್ಣ ವಾಹಿನಿಯ ಬಿಳಿ ಹೆಂಡ್ತಿ, ಉದಯ ವಾಹಿನಿಯ ಮಾನಸ ಸರೋವರ ಧಾರಾವಾಹಿಯಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸಿ ನಟನೆಯಲ್ಲಿ ಪಳಗಿದ ಶ್ರುತಿ ರಮೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದು ಎಂದರೆ ಅದು ಪಾಪಾ ಪಾಂಡು ಧಾರಾವಾಹಿಯಲ್ಲಿ.
“ನಾನು ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎಂದರೆ ಪಾಪಾ ಪಾಂಡುವಿನಲ್ಲಿ. ಪಾಪಾ ಪಾಂಡುವಿಗಿಂತಲೂ ಮೊದಲು ಒಂದಷ್ಟು ಧಾರಾವಾಹಿಗಳಲ್ಲಿ ನಟಿಸದ್ದರೂ ಪ್ರಮುಖ ಪಾತ್ರ ಎಂದಾಗ ಸಹಜವಾಗಿ ಆತಂಕವಾಗಿತ್ತು. ನನ್ನಿಂದ ಸಾಧ್ಯನಾ ಎಂಬ ಅನುಮಾನವೂ ಮೂಡಿತ್ತು. ಆದರೆ ದೊಡ್ಡವರು ಮಾತ್ರವಲ್ಲದೇ ಪುಟ್ಟ ಮಕ್ಕಳು ಕೂಡಾ ನಿಮ್ಮಿ ಪಾತ್ರವನ್ನು ಮೆಚ್ಚಿಕೊಂಡಾಗ ತುಂಬಾನೇ ಸಂತಸವಾಗಿತ್ತು. ಮಾತ್ರವಲ್ಲ ಬಣ್ಣದ ಬದುಕಿಗೆ ಬಂದುದು ಸಾರ್ಥಕವೆಂದೆನಿಸಿತ್ತು” ಎಂದು ಹೇಳುವ ಶ್ರುತಿ ರಮೇಶ್ ಒಂದೂವರೆ ವರ್ಷದ ಬಳಿಕ ಮಿಲಿಯಾಗಿ ಮರಳಿದ್ದು ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಪಿಆರ್ ಕೆ ಪ್ರೊಡಕ್ಷನ್ ನಡಿಯಲ್ಲಿ ಇತ್ತೀಚೆಗಷ್ಟೇ ಪ್ರಸಾರವಾದ ಫ್ಯಾಮಿಲಿ ಫ್ಯಾಕ್ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿರುವ ಶ್ರುತಿ ರಮೇಶ್ “ನನ್ನ ಹಿರಿತೆರೆ ಪಯಣ ಶುರುವಾಗಿದ್ದು ಪಿಆರ್ ಕೆ ಪ್ರೊಡಕ್ಷನ್ ನಿಂದ. ಪುನೀತ್ ರಾಜ್ ಕುಮಾರ್ ಬ್ಯಾನರ್ ನಿಂದ ನಾನು ಹಿರಿತೆರೆಗೆ ಕಾಲಿಟ್ಟಿರುವುದು ಸಂತಸ ತಂದಿದೆ. ಇದು ಪುಣ್ಯವೇ ಸರಿ” ಎಂದು ಹೇಳುತ್ತಾರೆ.
ಇನ್ನು ಶುಗರ್ ಲೆಸ್ ಸಿನಿಮಾದಲ್ಲಿ ಪೃಥ್ವಿ ಅಂಬರ್ ಜೊತೆ ಅಭಿನಯಿಸಿರುವ ಅವರು ಜೆರ್ಸಿ ನಂ 1, ಸಿರಿ ಲಂಬೋದರ ವಿವಾಹ ಸಿನಿಮಾಗಳಲ್ಲಿ ನಟಿಸಿದ್ದಾರೆ.