ಕಿರುತೆರೆ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಅನೇಕರು ಇಂದು ಬೆಳ್ಳಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆ ಪೈಕಿ ವಿಜಯನಗರದ ಕಾವ್ಯ ರಮೇಶ್ ಕೂಡಾ ಒಬ್ಬರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾವಲ್ಲಭ ಧಾರಾವಾಹಿಯಲ್ಲಿ ನಾಯಕ ಆರ್ಯವಲ್ಲಭನ ತಂಗಿ ಅದಿತಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಕಾವ್ಯ ರಮೇಶ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿ.

ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಕನಸು ಕಂಡಿದ್ದ ಕಾವ್ಯ ರಮೇಶ್ ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು. ಮುಂದೆ ನಟನೆಯತ್ತ ಮುಖ ಮಾಡಿದ ಕಾವ್ಯ ರಮೇಶ್ ಆಡಿಶನ್ ಗಳಲ್ಲಿ ಭಾಗವಹಿಸುವ ನಿರ್ಧಾರ ಮಾಡಿದರು. ಮೊದಲ ಆಡಿಶನ್ ನಲ್ಲಿ ಆಕೆ ಆಯ್ಕೆಯೂ ಆದಾಗ ಸ್ವರ್ಗಕ್ಕೆ ಮೂರು ಗೇಣು.

ಸೀತಾವಲ್ಲಭ ಧಾರಾವಾಹಿಯ ಅದಿತಿ ಯಾಗಿ ಕಿರುತೆರೆಗೆ ಪರಿಚಿತರಾದ ಕಾವ್ಯ ಎರಡು ವರ್ಷಗಳ ಕಾಲ ಅದಿತಿಯಾಗಿ ಸೀರಿಯಲ್ ವೀಕ್ಷಕರನ್ನು ರಂಜಿಸಿದರು. ಮನೋಜ್ಞ ನಟನೆಯ ಮೂಲಕ ಮನೆ ಮಾತಾದ ಕಾವ್ಯ ನಟಿಸಿದ್ದು ಕೇವಲ ಒಂದೇ ಧಾರಾವಾಹಿಯಲ್ಲಿ ಆದರೂ ಇಂದಿಗೂ ಆ ಪಾತ್ರ ವೀಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ.

ಮುಂದೆ ಹಿರಿತೆರೆಗೆ ಹಾರಿದ ಈಕೆ ಚೌಕಾಬಾರ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದು ಅದು ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಇನ್ನು ಗುಳ್ಟು ಖ್ಯಾತಿಯ ನವೀನ್ ಶಂಕರ್ ಅವರೊಂದಿಗೂ ಕಾವ್ಯ ನಟಿಸಿದ್ದು ಅಲ್ಲಿಯೂ ಇವರು ಎರಡನೇ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವ ಈ ಸಿನಿಮಾದ ಹೆಸರು ಇನ್ನು ಕೂಡಾ ರಿವೀಲ್ ಆಗಬೇಕಿದೆ.

ನೋಡದ ಪುಟಗಳು ಎನ್ನುವ ಸಿನಿಮಾದಲ್ಲಿಯೂ ಕಾವ್ಯ ರಮೇಶ್ ಅಭಿನಯಿಸಿದ್ದು ಅದು ಕೂಡಾ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿದೆ. ಇನ್ನು ಕನ್ನಡದ ಜೊತೆಗೆ ತೆಲುಗು ಸಿನಿರಂಗದಲ್ಲಿ ಮೋಡಿ ಮಾಡುತ್ತಿರುವ ಈಕೆ ನಚ್ಚಿನಾವುಡು ಸಿನಿಮಾದಲ್ಲಿ ನಟಿಸಿದ್ದು ಅದು ಕೂಡಾ ಈ ವರ್ಷ ತೆರೆ ಕಾಣಲಿದೆ. ಆರ್.ಸಿ.ಪುರಂ ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದು ಅದರ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.

ಬೆಳ್ಳಿತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಕಾವ್ಯ ರಮೇಶ್ ನಟಿಯಾಗಬೇಕು ಎಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ.

