ರಾಧಾ ರಮಣ ಧಾರಾವಾಹಿಯಾದ ಮೇಲೆ ನಟಿ ಶ್ವೇತಾ ಪ್ರಸಾದ್ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನಟಿ. ಫೋಟೋಶೂಟ್ ಮಾಡಿಸಿ, ಒಳ್ಳೊಳ್ಳೆಯ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಾ, ಫ್ಯಾನ್ಸ್ ಗಳಿಂದ ಬರುವ ಕಮೆಂಟ್ ಗಳಿಗೆ ರಿಪ್ಲೈ ಮಾಡುತ್ತಾ, ಇನ್ನಷ್ಟು ಹತ್ತಿರವಾಗುತ್ತಿರುತ್ತಾರೆ. ಈಗಂತೂ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜೀರೋ ಸೈಜ್ ನ್ನೂ ಮೈಟೈಂನ್ ಮಾಡುತ್ತಿದ್ದಾರೆ.
ಇನ್ನು ಶ್ವೇತಾ ಪ್ರಸಾದ್ ಅವರು ಅತಿ ಹೆಚ್ಚು ಟ್ರಾವೆಲ್ ಕೂಡ ಮಾಡುತ್ತಾರೆ. ಕಳೆದ ತಿಂಗಳು ಬ್ಯಾಂಕಾಕ್ ಗೆ ಹೋಗಿದ್ದ ನಟಿ ಅಲ್ಲಿನ ಬೀದಿ ಬೀದಿಯಲ್ಲಿ ಅಡ್ಡಾಡುತ್ತಾ, ಸ್ಪೆಷಲ್ ಫುಡ್ ಟೇಸ್ಟ್ ಮಾಡುತ್ತಾ, ಸ್ಟೇ ಆಗಿರುವ ರೂಮಿನಲ್ಲಿ ರೀಲ್ಸ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಅಲ್ಲದೆ ಇಡೀ ಭಾರತದ ಬಹುತೇಕ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿರುವ ಅವರು, ಪ್ರತೀ ಭಾಷೆಯನ್ನೂ ಕಲಿಯಲು ಬಯಸಿದ್ದಾರೆ. ಹೀಗಾಗಿ ಇತರೆ ಮಹಿಳೆಯರನ್ನು ಮಾತನಾಡಿಸಿ, ಅವರ ಭಾಷೆಯನ್ನು ಕಲಿಯುತ್ತಿದ್ದಾರೆ. ಇದರ ವೀಡಿಯೋಗಳನ್ನು ಶ್ವೇತಾ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಬೆಂಗಾಲಿ, ತುಳು, ತಮಿಳು, ಕೊಂಕಣಿ, ಸಂಸ್ಕೃತ, ಹಿಮಾಚಲ ಪ್ರದೇಶದ ಮಹಾಸುಪಹಾರಿ, ನೇಪಾಳಿ ಹೀಗೆ ಹಲವು ಭಾಷೆಯ ಜನರೊಂದಿಗೆ ಮಾತನಾಡಿದ್ದಾರೆ. ಅವರ ಭಾಷೆಯನ್ನು ಕಲಿಯಲೂ ಪ್ರಯತ್ನಿಸಿದ್ದಾರೆ.
ಶ್ವೇತಾ ಕಿರುತೆರೆಗೆ ಬಂದದ್ದು ಅಚಾನಕ್ಕಾಗಿಯಾದರೂ ಬೆಳೆದು ಗುರುತಿಸಿಕೊಂಡಿದ್ದು ಮಾತ್ರ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ. ಅವರು ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವವರು, ಬದುಕಿನ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಅರ್ಥೈಸಿಕೊಳ್ಳುವವರು.
ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆಯಲು ಬೆಂಗಳೂರಿಗೆ ಬಂದ ಶ್ವೇತಾ ಬೆಂಗಳೂರಿನ ಆರ್ವಿ ಕಾಲೇಜ್‌ನಿಂದ ಆರ್ಕಿಟೆಕ್ಟ್ ಆಗಿ ಹೊರಬಂದು ಅದೇ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಆದರೆ ಅನಿರೀಕ್ಷಿತವಾಗಿ ಇವರಿಗೆ ಒಲಿದ ಕಿರುತೆರೆ ಸುಮಾರು 700 ಕಂತುಗಳಲ್ಲಿ ಬಂದ ಧಾರಾವಾಹಿಯಲ್ಲಿ ನಟಿಸುವಂತೆಯೂ ಮಾಡಿತು.
ಅಭಿನಯದಿಂದಾಗಿ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ನಟಿ ಪ್ರಶಸ್ತಿಗೆ ಪಾತ್ರರಾದರು. ನಂತರ ರಾಧಾ ರಮಣ ಧಾರಾವಾಹಿ ಮೂಲಕ ಶ್ವೇತಾ ನಾಯಕಿಯ ಪಾತ್ರವಹಿಸಿದರು. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲೂ ಶ್ವೇತಾ ಭಾಗವಹಿಸಿದ್ದರು.
ಬಳಿಕ ಶ್ವೇತಾ ಅವರು ಆರ್‌ಜೆ ಪ್ರದೀಪ್ ಅವರನ್ನು ಪ್ರೀತಿಸಿ ಮದುವೆಯಾದರು. ಆ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರವೇ ಉಳಿದಿದ್ದಾರೆ. ಒಂದೊಳ್ಳೆ ಪಾತ್ರಕ್ಕಾಗಿ ಕಾಯುತ್ತಿರುವ ಶ್ವೇತಾ ಪ್ರಸಾದ್, ಸದ್ಯ ಪ್ರದೀಪ್ ಮಾಡುತ್ತಿರುವ ವೆಬ್ ಸಿರೀಸ್ ನಲ್ಲೂ ಜೊತೆಯಾಗಿದ್ದಾರೆ.