ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರತಿ ಸಂಚಿಕೆಯೂ ರೋಚಕ ತಿರುವುಗಳಿಂದ ಕೂಡಿದ್ದು ನಾಳಿನ ಸಂಚಿಕೆಯಲ್ಲಿ ಏನಾಗಬಹುದು ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿರುತ್ತದೆ. ಇದೀಗ ಅಗಸ್ತ್ಯನ ತಂಗಿ ಅಶ್ವಿನಿ ಎನ್ನುವ ಹೊಸ ಪಾತ್ರದ ಆಗಮನವೂ ಆಗಿದ್ದು ಮುಂದಿನ ದಿನಗಳಲ್ಲಿ ಕಥೆಗೆ ಮಗದಷ್ಟು ತಿರುವುಗಳು ದೊರೆತರೆ ಆಶ್ಚರ್ಯವೇನಿಲ್ಲ.
ನಾಯಕ ನಾಯಕಿಯ ಹೊರತಾಗಿ ನನ್ನರಸಿ ರಾಧೆಯ ಕೇಂದ್ರವಾಗಿದ್ದ ಖಳನಾಯಕಿ ಲಾವಣ್ಯಾ ಆಗಿ ನಟಿಸುತ್ತಿದ್ದ ತೇಜಸ್ವಿನಿ ಪ್ರಕಾಶ್ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದರು. ಇದೀಗ ಕಳೆದ ಎರಡು ಮೂರು ತಿಂಗಳಿನಿಂದ ಆಕೆಯ ಪಾತ್ರ ನಾಪತ್ತೆಯಾಗಿತ್ತು. ಆಕೆ ಈಗ ಮರಳಿದ್ದು ವೀಕ್ಷಕರ ಸಂತಸ ಇಮ್ಮಡಿಯಾಗಿದೆ.
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ತೇಜಸ್ವಿನಿ ಮದುವೆಯ ಸಲುವಾಗಿ ಧಾತಾವಾಹಿಯಿಂದ ಹೊರಬಂದಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಮೂರು ತಿಂಗಳ ನಂತರ ಆಕೆ ಮರಳಿದ್ದು ಕಥೆಗೆ ಟ್ವಿಸ್ಟ್ ಸಿಗಲಿದೆಯಾ ಎಂದು ತಿಳಿಯಬೇಕಿದೆ.
ಬೆಳ್ಳಿತೆರೆಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ತೇಜಸ್ವಿನಿ ಪ್ರಕಾಶ್ ಮೊದಲು ನಟಿಸಿದ್ದು ಮಸಣದ ಮಕ್ಕಳು ಸಿನಿಮಾದಲ್ಲಿ. ಮೊದಲ ಸಿನಿಮಾಕ್ಕೆ ಉತ್ತಮ ನಟಿ ಪ್ರಶಸ್ತಿ ಪಡೆದ ಈಕೆ ಮುಂದೆ ಗಜ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ತಂಗಿಯಾಗಿ ಕಾಣಿಸಿಕೊಂಡರು.
ಪ್ರೀತಿ ಏಕೆ ಭೂಮಿ ಮೇಲಿದೆ, ಮಾತಾಡ್ ಮಾತಾಡ್ ಮಲ್ಲಿಗೆ, ಗೂಳಿ ಹಟ್ಟಿ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ತರಂಗಿಣಿ, ಪ್ರೀತಿ ನೀ ಹೀಂಗ್ಯಾಕೆ, ಕಿಲಾಡಿ ಕೃಷ್ಣ, ನಂದಗೋಕುಲ, ಕಲ್ಯಾಣ ಮಸ್ತು, ನಿತ್ಯ ಜೊತೆ ಸತ್ಯ, ಡಯಾನಾ ಹೌಸ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ತೇಜಸ್ವಿನಿ ಪ್ರಕಾಶ್ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.
ತೆಲುಗಿನ ಪ್ರತಿಕ್ಷಣಂ ಹಾಗೂ ಕಣ್ಣಲೋ ನೀ ರೂಪಮಯೇ ಎಂಬ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ತೇಜಸ್ವಿನಿ ಅವರ ಕಿರುತೆರೆ ಪಯಣ ಶುರುವಾಗಿದ್ದು ನಿಹಾರಿಕಾಳಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿಹಾರಿಕಾ ಧಾರಾವಾಹಿಯಲ್ಲಿ ನಿಹಾರಿಕಾ ಆಗಿ ನಟಿಸಿದ್ದ ಈಕೆ ಇದೀಗ ಲಾವಣ್ಯಾ ಆಗಿ ಕಮಾಲ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಈಕೆಯ ನಟನೆಗೆ ವೀಕ್ಷಕರು ಮನ ಸೋತಿದ್ದು ಸಣ್ಣ ಗ್ಯಾಪ್ ನ ನಂತರ ಮರಳಿದ್ದು ಖುಷಿ ತಂದಿದೆ.