ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದಲ್ಲಿ ಅತಿದೊಡ್ಡ ಅಭಿಮಾನಿ ಬಳಗದ ಒಡೆಯ. ಮಾಸ್ ಗು ಕ್ಲಾಸ್ ಗು ಬಾಸ್ ಎನಿಸಿಕೊಂಡು ಅಭಿಮಾನಿಗಳ ಎದೆಯಲ್ಲಿ ‘ಡಿ ಬಾಸ್’ ಎಂದೇ ಉಳಿದುಕೊಂಡಿರುವ ದರ್ಶನ ಅವರ ಅಭಿಮಾನಿಗಳ, ಅಭಿಮಾನದ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆಯಿಲ್ಲ. ಸದ್ಯ ‘ಡಿ ಬಾಸ್’ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸ ಸಿನಿಮಾವೊಂದು ಘೋಷಿತವಾಗೋ ಸುದ್ದಿ ಕೇಳಿಬರುತ್ತಿದೆ. ಈ ಸುದ್ದಿ ಸತ್ಯವಾಗಿದ್ದೇ ಆದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿವುದಂತೂ ಖಂಡಿತ.
ಸದ್ಯ ದರ್ಶನ್ ಅವರು ‘ಕ್ರಾಂತಿ’ ಸಿನಿಮಾದ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿ ಹರಿಕೃಷ್ಣ ಸಾರಥ್ಯದಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ದರ್ಶನ್ ಹಾಗು ರಚಿತ ರಾಮ್ ಅವರು ಜೋಡಿಯಾಗಿ ನಟಿಸಲಿದ್ದಾರೆ. ಈಗ ಬರುತ್ತಿರೋ ಸುದ್ದಿಗಳ ಪ್ರಕಾರ ದರ್ಶನ್ ಅವರ ಮುಂದಿನ ಸಿನಿಮಾ ‘ದುನಿಯಾ’, ‘ಟಗರು’ ಸಿನಿಮಾಗಳ ಖ್ಯಾತಿಯ ಸೂರಿ ಅವರೊಂದಿಗೆ ಸೆಟ್ಟೇರಲಿದೆ. ಸದ್ಯ ಅಭಿಷೇಕ್ ಅಂಬರೀಷ್ ಅವರ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಬ್ಯುಸಿ ಆಗಿರುವ ಸುಕ್ಕ ಸೂರಿ ಜೊತೆಗೆ ಪಕ್ಕ ಮಾಸ್ ಪಾತ್ರದಲ್ಲಿ ಡಿ ಬಾಸ್ ಮಿಂಚಲಿದ್ದಾರೆ ಎನ್ನಲಾಗುತ್ತಿದೆ ಸ್ಯಾಂಡಲ್ವುಡ್ ನಲ್ಲಿ. ಈ ಸಿನಿಮಾಗೆ ‘ಕದನ ವಿರಾಮ’ ಎಂಬ ಹೆಸರನ್ನು ಕೂಡ ಫೈನಲ್ ಮಾಡಲಾಗಿದೆಯಂತೆ. ಪಾನ್ ಇಂಡಿಯನ್ ಚಿತ್ರ ಆಗಿರಲಿದೆ ಎಂಬ ಊಹೆಗಳು ಹರಿದಾಡುತ್ತಿದ್ದರು, ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿಗಳು ಸದ್ಯದಲ್ಲೇ ಲಭ್ಯವಾಗಲಿವೆ. ದರ್ಶನ್ ಹಾಗು ಸೂರಿ ಅವರ ಒಟ್ಟಾಗಿ ಸಿನಿಮಾ ಮಾಡುವರೆಂಬ ಸುದ್ದಿ ಬಹಳ ಹಿಂದೆಯೇ ಚಂದನವನದಲ್ಲಿ ಗುಲ್ಲೆಬ್ಬಿಸಿತ್ತು. ಇವರಿಬ್ಬರ ಜೋಡಿಯಲ್ಲಿ ಬರಲಿರೋ ಚಿತ್ರ ಎಂದಾಗ ಅಭಿಮಾನಿಗಳೆಲ್ಲರಲ್ಲಿ ನಿರೀಕ್ಷೆಯ ಪರ್ವತ ತಲೆಯೆತ್ತಿತ್ತು. ಸದ್ಯ ಈ ಚಿತ್ರಕ್ಕೊಂದು ಮುಹೂರ್ತ ಕೂಡಿಬಂದಂತೆ ಕಂಡಿದೆ.
ಪಾನ್ ಇಂಡಿಯ ಮಟ್ಟದಲ್ಲಿ ಬಿಡುಗಡೆ ಕಾಣಲಿರುವ ‘ಕ್ರಾಂತಿ’ ದರ್ಶನ್ ಅವರ 55ನೇ ಸಿನಿಮಾ. ಇವರ 54ನೇ ಚಿತ್ರವಾದ ‘ರಾಜ ಮದಕರಿ ನಾಯಕ’ ಅರ್ಧ ಚಿತ್ರೀಕರಣ ಮುಗಿಸಿಕೊಂಡಿದ್ದು, ಸದ್ಯದಲ್ಲೇ ಸೆಟ್ಟೆರಲಿದೆ. ಇದಾದ ನಂತರ ‘ರಾಬರ್ಟ್’ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಅವರೊಂದಿಗೆ ತಮ್ಮ 56ನೇ ಚಿತ್ರವನ್ನ ಮಾಡಲಿದ್ದಾರೆ ದರ್ಶನ್. ಇಷ್ಟೆಲ್ಲಾ ಚಿತ್ರಗಳ ನಡುವೆ ‘ಕದನ ವಿರಾಮ’ ಯಾವಾಗ ಸೆಟ್ಟೆರಲಿದೆ, ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.