ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಕ್ರೈಂ ಥ್ರಿಲರ್ ಕಥೆಗಳು ಸಿನಿಮಾವಾಗಿ ಬಂದು ಪ್ರೇಕ್ಷಕರ ಮನಗೆದ್ದಿವೆ. ಅಂತ ಸಿನಿಮಾಗಳಲ್ಲಿ ‘ಬೀರಬಲ್’ ಕೂಡ ಒಂದು. ಎಂ ಜಿ ಶ್ರೀನಿವಾಸ್ ಅವರು ರಚಿಸಿ, ನಟಿಸಿ ನಿರ್ದೇಶಸಿರುವ ಈ ಸಿನಿಮಾ ಸಿನಿಪ್ರೇಮಿಗಳನ್ನು ತುದಿಗಲಿನಲ್ಲಿ ನಿಂತು ನೋಡುವ ಹಾಗೇ ಮಾಡಿತ್ತು. ಸಿನಿಮಾ ‘ತಿಮ್ಮಾರಸು’ ಎಂಬ ಹೆಸರಿನಲ್ಲಿ ತೆಲುಗಿಗೂ ಸಹ ರಿಮೇಕ್ ಆಗಿತ್ತು. ಇದೊಂದು ಟ್ರೈಲಾಜಿ ಕಥೆ. ಅಂದರೆ ಒಂದೇ ಕತೆ ಮುಂದುವರೆದು ಮೂರು ಸಿನಿಮಾಗಳಲ್ಲಿ ಮೂರು ಭಾಗಗಳಾಗಿ ಬರುತ್ತದೆ. 2019ರಲ್ಲಿ ತೆರೆಕಂಡ ‘ಬೀರಬಲ್’ ಮೊದಲ ಭಾಗವಷ್ಟೇ ಹಾಗಾಗಿ ಇನ್ನುಳಿದ ಭಾಗಗಳ ಬಗ್ಗೆ ಪ್ರಶ್ನೆ ಕೇಳಿಬರುತ್ತಲೇ ಇತ್ತು. ಸದ್ಯ ಇದರ ಬಗೆಗಿನ ಹೊಸ ವಿಷಯವೊಂದನ್ನು ನಿರ್ದೇಶಕರು ಹಂಚಿಕೊಂಡಿದ್ದಾರೆ.


ಇಂದು ನಟ-ನಿರ್ದೇಶಕ ಎಂ ಜಿ ಶ್ರೀನಿವಾಸ್ ಅವರ ಜನ್ಮದಿನ. ಆ ಪ್ರಯುಕ್ತ ಬೀರಬಲ್ ಎರಡನೇ ಭಾಗದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಮೊದಲನೇ ಭಾಗಕ್ಕೆ ‘ಬೀರಬಲ್ ಕೇಸ್ 1: ಫೈಂಡಿಂಗ್ ವಜ್ರಮುನಿ’ ಎಂಬ ಪೂರ್ಣ ಹೆಸರಿತ್ತು. ಅದೇ ರೀತಿ ಎರಡನೇ ಭಾಗಕ್ಕೆ ‘ಬೀರಬಲ್ ಕೇಸ್ 2: ಅವ್ರನ್ ಬಿಟ್ ಇವ್ರನ್ ಬಿಟ್ ಅವ್ರ್ ಯಾರು’ ಎಂದು ಹೆಸರಿಡಲಾಗಿದೆ. “ನನ್ನ ಜನುಮದಿನದ ಪ್ರಯುಕ್ತ ನನ್ನನ್ನ ಎಲ್ಲರೂ ಪದೇ ಪದೇ ಕೇಳುತ್ತಿದ್ದ ಸಿನಿಮಾದ ಬಗೆಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ ಶ್ರೀನಿ.



ಸದ್ಯ ಶ್ರೀನಿ ಕರುನಾಡ ಚಕ್ರವರ್ತಿ ಶಿವಣ್ಣನವರಿಗೆ ಹೊಸ ‘ಘೋಸ್ಟ್’ ಎಂಬ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಆದಷ್ಟು ಬೇಗ ಚಿತ್ರೀಕರಣ ಆರಂಭವಾಗಲಿದೆ. ಇದಾದ ನಂತರವೇ ‘ಬೀರಬಲ್’ ಚಿತ್ರ ಮಾಡಲಿದ್ದಾರೆ ಶ್ರೀನಿ. ಸದ್ಯ ಬಿಟ್ಟಿರುವ ಪೋಸ್ಟರ್ ನಲ್ಲಿ 2023ರಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಶ್ರೀನಿ ಹೇಳಿದ್ದು, ಕಾದು ನೋಡಬೇಕಿದೆ.

