ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಘರ್ಷ ಧಾರಾವಾಹಿ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ವಿಭಿನ್ನ ಕಥಾಹಂದರದ ಸಂಘರ್ಷ ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ತನ್ನ ಪಯಣಕ್ಕೆ ವಿದಾಯ ಹೇಳಿದೆ. ಸಂಘರ್ಷದಲ್ಲಿ ನಾಯಕಿ ಜಿಲ್ಲಾಧಿಕಾರಿ ಇಂದಿರಾ ಆಗಿ ಅಭಿನಯಿಸಿರುವ ತೇಜಸ್ಬಿನಿ ಶೇಖರ್ ಅವರು ಧಾರಾವಾಹಿಯ ಕುರಿತು ಭಾವುಕ ಪತ್ರ ಹಂಚಿಕೊಂಡಿದ್ದಾರೆ.
“ಸಂಘರ್ಷವು ಕೇವಲ ಒಂದು ಸ್ಮರಣೀಯ ಪ್ರಯಾಣ ಅಲ್ಲ ಅದು ಒಂದು ಉತ್ತಮವಾದ ಜೀವನಾನುಭವ. ಇಂತಹ ಸುಂದರ ಪ್ರಯಾಣವು ಕೊನೆಗೊಂಡಿದೆ ಎಂದು ಒಪ್ಪಿಕೊಳ್ಳುವುದು ಕಷ್ಟ ಸಾಧ್ಯ. ನಮ್ಮ ‘ಸಂಘರ್ಷ’ ಧಾರವಾಹಿ ತಂಡವು ಕೇವಲ ತಂಡವಾಗಿರಲಿಲ್ಲ, ಇಲ್ಲಿ ಉತ್ತಮ ವ್ಯಕ್ತಿತ್ವವುಳ್ಳ ಸ್ನೇಹಿತರನ್ನು ಕಂಡೆ, ನನ್ನ ಈ ಪ್ರಯಾಣವನ್ನು ಸುಂದರವಾಗಿಸಿದ ನಿಮ್ಮೆಲ್ಲರಿಗೂ ಪ್ರೀತಿಯ ಧನ್ಯವಾದಗಳು” ಎಂದು ತೇಜಸ್ವಿನಿ ಶೇಖರ್ ಬರೆದುಕೊಂಡಿದ್ದಾರೆ.
ಇದರ ಜೊತೆಗೆ “ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯ ಬಗ್ಗೆ ಏನು ಹೇಳಲಿ? ಇದು ಈಗಾಗಲೇ ಜನರ ಮನಸ್ಸಲ್ಲಿ ಗುರುತು ಮೂಡಿಸಿ ಒಂದು ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ, ಹಾಗೂ ಈ ಸಂಸ್ಥೆಯಲ್ಲಿ ಎರಡನೇ ಬಾರಿಗೆ ಕಾರ್ಯನಿರ್ವಹಿಸಿದ್ದು ಖುಷಿಯ ವಿಷಯ ಮತ್ತು ಈ ಪಯಣ ಹೀಗೆ ಮುಂದುವರಿಯುತ್ತದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ ತೇಜಸ್ವಿನಿ.
ಕೊನೆಯಲ್ಲಿ “ಹಾಗೆ ನನ್ನ ಎಲ್ಲಾ ಅಭಿಮಾನಿ ವರ್ಗದವರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಬೆಂಬಲಿಸುವ ಪ್ರತಿಯೊಬ್ಬರಿಗೂ ಪ್ರೀತಿಯ ಧನ್ಯವಾದಗಳು, ನಿಮ್ಮ ಪ್ರೀತಿ ಬೆಂಬಲ ಇರದೆ ನಾನಿಲ್ಲ, ನನ್ನ ಪ್ರತಿ ಹೆಜ್ಜೆಗೂ ನಿಮ್ಮ ಪ್ರೀತಿ ಬೆಂಬಲಕ್ಕೆ ನಾನು ಚಿರ ಋಣಿ “ಎಂದು ಪತ್ರ ಕೊನೆಗಾಣಿಸಿದ್ದಾರೆ.