ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನಾ ಆಗಿ ಅಭಿನಯಿಸಿದ್ದ ಸುಷ್ಮಾ ರಾವ್ ಮನೆ ನಟನೆಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದ ಚೆಲುವೆ. ಗುಪ್ತಗಾಮಿನಿ ಧಾರಾವಾಹಿಯ ನಂತರ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ನಾಯಕಿ ಆಗಿ ಅಭಿನಯಿಸಿರುವ ಸುಷ್ಮಾ ರಾವ್ ಇದೀಗ ದಶಕಗಳ ನಂತರ ಮತ್ತೆ ನಟನೆಯತ್ತ ಮರಳಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾಗಿರುವ ಬೆಟ್ಟದ ಹೂ ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ.
ಬೆಟ್ಟದ ಹೂ ಧಾರಾವಾಹಿಯಲ್ಲಿ ಡಾ.ಭಾವನಾ ಆಗಿ ಮೋಡಿ ಮಾಡುತ್ತಿರುವ ಸುಷ್ಮಾ ರಾವ್ ತಮಗೆ ಹೆಸರು ತಂದುಕೊಟ್ಟ ಪಾತ್ರದ ಹೆಸರಿನಲ್ಲಿಯೇ ಕಿರುತೆರೆಯಲ್ಲಿ ನಟಿಸುತ್ತಿರುವುದು ವೀಕ್ಷಕರಿಗೆ ಸಂತಸ ನೀಡಿದೆ.
ಎಸ್. ನಾರಾಯಣ್ ನಿರ್ದೇಶನದ ಭಾಗೀರಥಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸುಷ್ಮಾ ರಾವ್ ಮುಂದೆ ಸ್ವಾತಿಮುತ್ತು, ಬಿದಿಗೆ ಚಂದ್ರಮ,ಯಾವ ಜನ್ಮದ ಮೈತ್ರಿ ಧಾರಾವಾಹಿಯಲ್ಲಿ ಅಭಿನಯಿಸಿದರು.
ಮುಂದೆ ಗುಪ್ತಗಾಮಿನಿಯ ಭಾವನಾ ಆಗಿ ಕಿರುತೆರೆಯಲ್ಲಿ ಮನೆ ಮಾತಾದ ಸುಷ್ಮಾ ಆ ಪಾತ್ರಕ್ಕೆ ಬೆಸ್ಟ್ ಟೆಲಿವಿಶನ್ ಅವಾರ್ಡ್ ಪ್ರಶಸ್ತಿ ಕೂಡಾ ಪಡೆದರು. ಮುಂದೆ ಜೀ ಕನ್ನಡ ವಾಹಿನಿಯ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ನಾಯಕಿ ಆಗಿ ಅಭಿನಯಿಸಿದ್ದ ಸುಷ್ಮಾ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ಮಗಳು ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದರು.
ನಟನೆಯ ಹೊರತಾಗಿ ನಿರೂಪಕಿಯಾಗಿ ಗುರುತಿಸಿಕೊಂಡ ಇರುವ ಸುಷ್ಮಾ ರಾವ್ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆದವರು. ಸೀರಿಯಲ್ ಸಂತೆ, ಅವಾರ್ಡ್ ಕಾರ್ಯಕ್ರಮ, ಹಾಡು ಹರಟೆ, ಉದಯ ಉತ್ಸವ, ತರ್ಲೆ ನನ್ ಮಕ್ಳು, ಜೀನ್ಸ್ ಹಾಗೂ ಮನೆ ಮನೆ ಮಹಾಲಕ್ಷ್ಮಿ ಮುಂತಾದ ಶೋಗಳ ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಸುಷ್ಮಾ ರಾವ್ ಅವರು ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದು ವೀಕ್ಷಕರಿಗೆ ಖುಷಿ ತಂದಿದೆ.