ಬೆಳ್ಳಿತೆರೆಯ ಮೇಲೆ ಮಾತ್ರ ಪ್ರದರ್ಶನ ಕಾಣುತ್ತಿದ್ದ ಚಲನಚಿತ್ರಗಳು ಟಿವಿಯ ಕಿರುತೆರೆಮೇಲೂ ಬರಲು ಪ್ರಾರಂಭಿಸಿ ಅದೆಷ್ಟೋ ಕಾಲವಾಯ್ತು. ಇದೀಗ ಅಧಿಕೃತವಾಗಿ ಮೊಬೈಲ್ ಫೋನ್ ಗಳ ಕಿರುಪರದೆ ಮೇಲೂ ಬರಲಾರಂಭಿಸಿವೆ. ಇದಕ್ಕೆ ಮುಖ್ಯ ಕಾರಣ ‘ಒಟಿಟಿ’.ಕೊರೋನ ನಂತರವಂತು ನೇರವಾಗಿ ಒಟಿಟಿ ಮೆಟ್ಟಿಲೇರೋ ಸಿನಿಮಾಗಳು ಬರುತ್ತಿವೆ. ಅಂತೆಯೇ ಈ ವಾರ ಕನ್ನಡದ ಒಟಿಟಿ ಪ್ರೀಯರಿಗೆ ಮನರಂಜನೆಗೆ ಹಲವು ಆಯ್ಕೆಗಳು ಸಿಗುತ್ತಿವೆ. ಥೀಯೇಟರ್ ಗಳಲ್ಲಿ ತಮ್ಮ ಓಟ ಮುಗಿಸಿಕೊಂಡು ಈ ವಾರ ಒಟಿಟಿ ಕಡೆಗೆ ಬರುತ್ತಿರೋ ಹಲವು ಸಿನಿಮಾಗಳು ಕನ್ನಡದಲ್ಲೇ ನೋಡಲು ಸಿಗುತ್ತಿವೆ.
‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ ಅವರ ಹೊಸ ಸಿನಿಮಾ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಸಿನಿಮಾ ಸೀದಾ ಒಟಿಟಿ ಕಡೆಗೆ ಹೆಜ್ಜೆ ಇಟ್ಟಿದ್ದು, ಇದೇ ಜುಲೈ 22ರಿಂದ ‘ಜೀ5’ ಆಪ್ ನಲ್ಲಿ ನೋಡಲು ಸಿಗುತ್ತಿದೆ. ಇಸ್ಲಾಹುದ್ದಿನ್ ಅವರು ಇದರ ನಿರ್ದೇಶಕರು.
ತನ್ನ ಟ್ರೈಲರ್ ನಿಂದ ಹಲವೆಡೆ ವೈರಲ್ ಆದ, ವಿಶೇಷ ಕಥಾವಸ್ತು ಇರುವಂತಹ ‘ಫಿಸಿಕ್ಸ್ ಟೀಚರ್’ ಸಿನಿಮಾ ಕೂಡ ತನ್ನ ಬೆಳ್ಳಿತೆರೆ ಪಯಣ ಮುಗಿಸಿ ಒಟಿಟಿ ಕಡೆಗೆ ಬರುತ್ತಿದ್ದು, ಇದೇ ಜುಲೈ 22ರಿಂದ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಸುಮುಖ ಎಂಬ ಹೊಸ ಪ್ರತಿಭೆ ನಟಿಸಿ-ರಚಿಸಿ ನಿರ್ದೇಶಿಸಿರುವ ಈ ಸಿನಿಮಾ ವಿಜ್ಞಾನದ ಬಗ್ಗೆ ಮಾತನಾಡುವಂತಹ ಚಿತ್ರ. ಇಂತಹ ಸಿನಿಮಾಗಳು ಕನ್ನಡದಲ್ಲಿ ಅಪರೂಪವಾದ್ದರಿಂದ ಇದರ ಮೇಲಿನ ನಿರೀಕ್ಷೆ ಹೆಚ್ಚಿಗೇ ಇತ್ತು.
ಇನ್ನು ತಮನ್ನಾ ಭಾಟಿಯ, ವಿಕ್ಟರಿ ವೆಂಕಟೇಶ್, ವರುಣ್ ತೇಜ್ ಹಾಗು ಮೇಹ್ರೀನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗಿನ ಹೊಸ ಸಿನಿಮಾ ‘ಎಫ್ 3(F3)’ ಕೂಡ ಒಟಿಟಿ ಮೆಟ್ಟಿಲೇರಿದ್ದು, ಸೋನಿ ಲಿವ್ ಆಪ್ ನಲ್ಲಿ ಕನ್ನಡದಲ್ಲೇ ಸಿಗುತ್ತಿದೆ. ಜೊತೆಗೆ ತಮಿಳಿನ ಪ್ರಖ್ಯಾತ ನಟ ಧನುಷ್ ಅವರು ನಟಿಸಿರುವ ‘ನೆಟ್ ಫ್ಲಿಕ್ಸ್’ ಸಂಸ್ಥೆಯ ಸಿನಿಮಾವಾದ ‘ದಿ ಗ್ರೇ ಮ್ಯಾನ್’ ಕೂಡ ಬಿಡುಗಡೆಯಾಗಿದ್ದು, ನೆಟ್ ಫ್ಲಿಕ್ಸ್ ನಲ್ಲಿ ಕನ್ನಡದಲ್ಲೂ ನೋಡಬಹುದಾಗಿದೆ. ಹಾಗೆಯೇ ಇಂಗ್ಲೀಷ್ ನ ಪ್ರಖ್ಯಾತ ಸಿನಿಮಾ ಸೀರೀಸ್ ‘ಫಾಸ್ಟ್ ಅಂಡ್ ಫುರಿಯಸ್’ ನ ಒಂಬತ್ತನೇ ಭಾಗವಾದ ‘ಫಾಸ್ಟ್ ಅಂಡ್ ಫುರಿಯಸ್ 9’ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.
ಇವಷ್ಟೇ ಅಲ್ಲದೇ ಆರ್ ಮಾಧವನ್ ಅವರು ನಟಿಸಿ ನಿರ್ದೇಶಿಸಿರುವ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾ ಕೂಡ ತನ್ನ ಒಟಿಟಿ ದಿನಾಂಕ ಘೋಷಣೆ ಮಾಡಿದ್ದು, ಇದೇ ಜುಲೈ 26ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದಲ್ಲಿಯೂ ಪ್ರದರ್ಶನ ಕಾಣಲಿದೆ. ಹಾಗೆಯೇ ಇಂಗ್ಲೀಷ್ ನ ಪ್ರಖ್ಯಾತ ಸಿನಿಮಾ ‘ಬ್ಯಾಟ್ ಮ್ಯಾನ್’ ಕೂಡ ಇದೇ ಜುಲೈ 27ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಂಗ್ಲೀಷ್ ಮಾತ್ರವಲ್ಲದೆ ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಾಗುತ್ತಿದೆ. ಜೊತೆಗೆ ರಕ್ಷಿತ್ ಶೆಟ್ಟಿ ಅವರ ಬಹುಮೆಚ್ಚುಗೆ ಪಡೆದಂತಹ ಸಿನಿಮಾ ‘777 ಚಾರ್ಲಿ’ ಕೂಡ ಜುಲೈ 29ರಿಂದ ‘ವೂಟ್’ ಆಪ್ ನಲ್ಲಿ ಪ್ರದರ್ಶನ ಕಾಣಲಿದೆ ಎಂಬ ಸುದ್ದಿಯಿದೆ. ಒಟ್ಟಿನಲ್ಲಿ ಈ ವಾರ ಕನ್ನಡ ಸಿನಿರಸಿಕರಿಗೆ ಒಟಿಟಿ ಪರದೆ ಮೇಲೆ ಹಲವು ಆಯ್ಕೆಗಳು ಮೂಡಿಬರುವುದೇ ಸಂಭ್ರಮ.