‘ಕೆಜಿಎಫ್’ ಕನ್ನಡಿಗರ ಹೆಮ್ಮೆ, ಕನ್ನಡ ಚಿತ್ರರಂಗಕ್ಕೊಂದು ಗರಿಮೆ. ನರಾಚಿಯ ಗೇಟ್ ಗಳು ಅದ್ಯಾವಾಗ ತೆರೆಯುತ್ತವೆಯೋ, ರಾಕಿ ಭಾಯ್ ಆಳ್ವಿಕೆಯನ್ನ ಯಾವಾಗ ನೋಡುತ್ತೇವೋ ಅಂತ ಕನ್ನಡಿಗರಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಎಲ್ಲ ಭಾಷಿಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇನ್ನೇನು ಎರಡು ವಾರಗಳಲ್ಲಿ ಸಿನಿಮಾ ಬೆಳ್ಳಿತೆರೆಗಳ ಮೇಲೆ ರಾರಾಜಿಸಲಿದೆ. ಮಾರ್ಚ್ 27ಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ಈ ಅತಿನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಜನರಿಗರ್ಪಿಸಲಿರೋ ಚಿತ್ರತಂಡ ಇಂದು ಅಂದರೆ ಮಾರ್ಚ್ 21ರ ಬೆಳಿಗ್ಗೆ 11:07ಕ್ಕೆ ಸರಿಯಾಗಿ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಿದ್ದಾರೆ.
ಮೊದಲ ಅಧ್ಯಾಯದಂತೆ ದ್ವಿತೀಯ ಅಧ್ಯಾಯ ಕೂಡ ರವಿ ಬಸ್ರುರ್ ಸಂಗೀತದಲ್ಲೇ ಜನರನ್ನ ರೋಮಾಂಚನಗೊಳಿಸಲಿರುವುದು ನಮ್ಮೆಲ್ಲರಿಗೂ ಗೊತ್ತಿರೋ ವಿಷಯ. ಬಿಡುಗಡೆಗೊಂಡಿರೋ ‘ತೂಫಾನ್’ಗೂ ಕೂಡ ಎಲ್ಲ ಭಾಷೆಯಲ್ಲೂ ಇವರದ್ದೇ ಸಂಗೀತ. ಕನ್ನಡದಲ್ಲಿ ಹಾಡಿನ ಸಾಹಿತ್ಯವನ್ನು ಕೂಡ ಬಸ್ರುರ್ ಅವರೆ ಬರೆದಿದ್ದಾರೆ. ರವಿ ಬಸ್ರುರ್ ಅವರ ಜೊತೆಗೆ ಸಚಿನ್ ಬಸ್ರುರ್, ಮೋಹನ್ ಕೃಷ್ಣ, ಸಂತೋಷ್ ವೆಂಕಿ, ಪುನೀತ್ ರುದ್ರನಾಗ್ ಹಾಗು ಮನೇಶ್ ದಿನಕರ್ ಪುರುಷನ ಸಾಲುಗಳಿಗೆ ದನಿಯಗಿದ್ದರೆ, ವರ್ಷ ಆಚಾರ್ಯ ಮಹಿಳಾ ಗಾಯಕಿ. ಇನ್ನು ಗಿರಿಧರ್ ಕಾಮತ್, ರಕ್ಷಾ ಕಾಮತ್ ಮುಂತಾದ ಬಾಲಗಾಯಕರು ಸಹ ಈ ಹಾಡಿಗೆ ತಮ್ಮ ಸ್ವರ ನೀಡಿದ್ದಾರೆ.
ಲಹರಿ ಮ್ಯೂಸಿಕ್ ಹಾಗು ಟಿ-ಸೀರೀಸ್ ಯೂಟ್ಯೂಬ್ ಚಾನೆಲ್ ನಲ್ಲೆ ಕನ್ನಡ, ಮಲಯಾಳಂ, ತಮಿಳು ಹಾಗು ತೆಲುಗಿನಲ್ಲಿ ಬಿಡುಗಡೆಯಗಿರೋ ಹಾಡಿನ ಹಿಂದಿ ರಾಗ ‘ಎಂ ಆರ್ ಟಿ ಮ್ಯೂಸಿಕ್’ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೇವಲ 34 ನಿಮಿಷದಲ್ಲೇ ಕನ್ನಡದ ವಿಡಿಯೋ ಒಂದು ಲಕ್ಷ ಲೈಕ್ ಗಳನ್ನು ಪಡೆದಿತ್ತು. ಮಿಲಿಯನ್ ಗಟ್ಟಲೆ ಆಗಿರುವ ನೋಡುಗರ ಸಂಖ್ಯೆ ಅತ್ಯಂತ ರಭಸದಲ್ಲಿ ಏರಿಕೆಯಾಗುತ್ತಲೇ ಇದೆ.
ಬಹುಪಾಲು ಕೇಳುಗರ ಮೈರೋಮ ನಿಲ್ಲುವಷ್ಟು ರೋಮಾಂಚನಗೊಳಿಸಿರುವ ಹಾಡಿಗೆ ಪ್ರಶಂಸೆ ಹರಿದುಬರುತ್ತಿದೆಯಾದರು, ಅಲ್ಲಲ್ಲಿ ಕೆಲವು ಅಸಮಾಧಾನಗಳು ಕೂಡ ಏಳುತ್ತಿವೆ. ಕನ್ನಡದ ಹಾಡಿನಲ್ಲೂ ಹಿಂದಿಯ ಸಾಲುಗಳು ಬೇಕೇ? ಎಂದು ಕೇಳುತ್ತಿರುವ ಪ್ರಶ್ನೆಗಳು ಕೂಡ ಅಲ್ಲಲ್ಲಿ ಏಳುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಒಂದಿಷ್ಟು ಪರ-ವಿರೋಧದ ಮಾತಿನ ಚಕಮಕಿ ಕೂಡ ನಡೆಯುತ್ತಿದೆ. ಏನೇ ಆದರೂ ಕೆಜಿಎಫ್ ಕನ್ನಡದ ಹೆಮ್ಮೆಯೇ ಸರಿ.