ಮಾಡಿರೋ ಎರಡೇ ಚಿತ್ರಗಳಿಂದ ಜನರಲ್ಲಿ ತನ್ನ ಬಗ್ಗೆ ಹೊಸದೊಂದು ಭರವಸೆ ಹುಟ್ಟಿಸಿರೋ ನಿರ್ದೇಶಕರು ಅನೂಪ್ ಭಂಡಾರಿ. ದಶಕಗಳಿಂದ ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಆಗಿರೋ ಬಾದ್ಶಾಹ್ ಕಿಚ್ಚ ಸುದೀಪ. ಇವರಿಬ್ಬರು ಜೊತೆಯಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎಂದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ‘ರಂಗಿತರಂಗ’, ‘ರಾಜರಥ’ದಂತಹ ಚಿತ್ರಗಳಿಂದ ಜನರ ಮನಸೆಳೆದ ನಿರೂಪ್ ಭಂಡಾರಿ ಅವರ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ ಚಿತ್ರ ಸದ್ಯ ಭಾರತದಾದ್ಯಂತ ಬಹುನಿರೀಕ್ಷಿತ ಚಿತ್ರವಾಗಿದೆ. ಬಹುಕಾಲದ ಹಿಂದೆಯೇ ಸೆಟ್ಟೇರಿದ್ದ ಈ ಸಿನಿಮಾ ಕೊನೆಗೂ ಬೆಳ್ಳಿತೆರೆ ಏರುವ ಗಳಿಗೆಯನ್ನ ಚಿತ್ರತಂಡ ಹೇಳಹೊರಟಿದ್ದಾರೆ.
ಚಿತ್ರೀಕರಣ ಪ್ರಾರಂಭವಾದಾಗಿನಿಂದ ಚಿತ್ರತಂಡದವರು ಒಂದಲ್ಲ ಒಂದು ವಿಡಿಯೋ ಬಿಡುಗಡೆಗೊಳಿಸಿ ಪ್ರೇಕ್ಷಕರ ಕುತೂಹಲವನ್ನ ಹೆಚ್ಚಿಸುತ್ತಲೇ ಇದ್ದರು. ಮೊದಲು ‘ಫಾಂತಮ್’ ಎಂದಿದ್ದ ಸಿನಿಮಾ ಹೆಸರನ್ನು ‘ವಿಕ್ರಾಂತ್ ರೋಣ’ ಎಂದು ಬದಲಾಯಿಸಲಾಯಿತು. ‘ಭುರ್ಜ್ ಖಲಿಫಾ’ದಲ್ಲಿ ಸಿನಿಮಾದ ಟೀಸರ್ ಬಿಡುಗಡೆಗೊಳಿಸಿ ಪ್ರಪಂಚದೆಲ್ಲೆಡೆಯ ಗಮನವನ್ನ ಸೆಳೆದಿದ್ದರು. ಕೋರೋನ ಕಾರಣದಿಂದ ಚಿತ್ರದ ಬೆಳ್ಳಿತೆರೆಯ ಭೇಟಿ ಮುಂದೆ ಹೋಗುತ್ತಲೇ ಇತ್ತು. ಇದೀಗ ಇದೇ ಏಪ್ರಿಲ್ 2ರಂದು ಟೀಸರ್ ಒಂದರ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನ ಹೇಳಲಿದ್ದಾರೆ ಚಿತ್ರತಂಡ. ಏಪ್ರಿಲ್ 2ರ ಬೆಳಿಗ್ಗೆ 9:55ಕ್ಕೆ ಬಿಡುಗಡೆಯಾಗಲಿರೋ ಟೀಸರ್ ಒಂದು ಚಿತ್ರದ ಬಿಡುಗಡೆ ದಿನಾಂಕವನ್ನ ಹೊತ್ತು ತರಲಿದೆ.
‘ವಿಕ್ರಾಂತ್ ರೋಣ’ ಒಂದು ಪಾನ್ ಇಂಡಿಯನ್ ಸಿನಿಮಾ ಆಗಿದ್ದು, ಇಂಗ್ಲೀಷ್ ಅವತರಣಿಕೆ ಕೂಡ ಬರುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿ ನೀತಾ ಅಶೋಕ್ ಅವರು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ನಿರೂಪ್ ಭಂಡಾರಿ, ರವಿಶಂಕರ್ ಗೌಡ, ಮಧುಸೂದನ್ ರಾವ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಬಾಲಿವುಡ್ ಬೆಡಗಿ ಜಾಕ್ವೀಲಿನ್ ಫೆರ್ನಾಂಡಿಸ್ ಅವರು ನಟಿಸಿದ್ದಾರೆ. ಅಜನೀಶ್ ಲೋಕನಾತ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಜಾಕ್ ಮಂಜು ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.