ವಿನಯ್ ರಾಜಕುಮಾರ್, ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ, ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರೋ ಹೆಸರು. ‘ಸಿದ್ದಾರ್ಥ’ ಚಿತ್ರದಿಂದ ಸಿನಿರಂಗ ಸೇರಿ, “ರನ್ ಅಂಥೋನಿ” ಅಲ್ಲಿ ಓಡಿ, ‘ಅನಂತು vs ನುಸ್ರತ್’ ನ ಲಾಯರ್ ಆಗಿ ಇದೀಗ “ಪೆಪೆ”ಯಾಗಿ ಕನ್ನಡಿಗರ ಮುಂದೆ ಬರಲಿದ್ದಾರೆ.
ರಾಜ್ ಕುಟುಂಬದ ಕುಡಿ ವಿನಯ್ ಅವರ ಮುಂದಿನ ಚಿತ್ರ “ಪೆಪೆ”ಯ ಟೀಸರ್ ಇಂದು, ಅಂದರೆ ಫೆಬ್ರವರಿ 17ರಂದು ‘ಪಿ ಆರ್ ಕೆ ಆಡಿಯೋ’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ರಕ್ತಸಿಕ್ತವಾದ ಈ ಸಿನಿತುಣುಕು ಯುವಜನತೆಯ ಮನ ಗೆಲ್ಲುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ‘ಉದಯ್ ಸಿನಿ ವೆಂಚರ್” ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ಜೊತೆಗೆ ಯಶ್ ಶೆಟ್ಟಿ, ಬಾಲ ರಾಜವಾಡಿ, ಮೇದಿನಿ ಕೆಳಮನೆ ಮುಂತಾದವರನ್ನೊಳಗೊಂಡ ಬಹುಪಾಲು ಹೊಸಬರ ತಾರಾಗಣವಿದೆ.
“ಪೆಪೆ”ಯ ಸೃಷ್ಟಿಕರ್ತರಾದ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಅವರು ಹೇಳುವ ಪ್ರಕಾರ ಇದೊಂದು ಮಲೆನಾಡಿನ ಸೊಗಡಿನ ಒಂದು ಗ್ರಾಮ್ಯ ಕಥೆ. ಚಿತ್ರದ ಟೀಸರ್ ನಲ್ಲೂ ಸಹ ಗ್ರಾಮೀಣ ಸೊಬಗು ಎದ್ದು ಕಾಣುತ್ತದೆ. ತುಂಬಾ ರಗಡ್ ಲುಕ್ ಅಲ್ಲಿರೋ ವಿನಯ್ ಗೆ ಈ ಪಾತ್ರ ಸರಿಹೊಂದುವಂತೆ ಕಾಣುತ್ತಿದೆ. ಪೂರ್ಣಚಂದ್ರ ತೇಜಸ್ವಿಯವರ ಹಿನ್ನೆಲೆ ಸಂಗೀತ ನೋಡುಗರ ಮನದಲ್ಲಿ ಉಳಿದುಬಿಡುವಂತದ್ದು. ಸಮರ್ಥ್ ಉಪಾಧ್ಯ ಅವರ ಛಾಯಗ್ರಹಣದಲ್ಲಿ ಮೂಡಿಬಂದಿರೋ ದೃಶ್ಯಗಳು ಕಣ್ಣಿಗೆ ಖುಷಿಕೊಡುತ್ತವೆ.
ಒಟ್ಟಿನಲ್ಲಿ ಪ್ರತೀ ಚಿತ್ರದಲ್ಲೂ ವಿಭಿನ್ನ ಕಥೆಗಳನ್ನ ಆರಿಸಿಕೊಳ್ಳುತ್ತಿರೋ ವಿನಯ್ ರಾಜಕುಮಾರ್ ರವರಿಗೆ ಈ ಚಿತ್ರದಿಂದ ಸಾಕಷ್ಟು ಯಶಸ್ಸು ಸಿಗಲಿ, ಟೀಸರ್ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ-ಕಾತುರತೆ ಉಂಟುಮಾಡಿರೋ ಚಿತ್ರ ಎಲ್ಲರ ಮೆಚ್ಚುಗೆ ಪಡೆಯುವಂತಾಗಲಿ ಎಂಬುದೇ ನಮ್ಮಾಸೆ.