ಅಪ್ಪು ಉಸಿರಿನೊಂದಿಗೇ ಸಿನಿಮಾವಾಗದೆ ನಿಂತುಹೋದ ಕಥೆಗಳಿಗೆ ಲೆಕ್ಕವೇ ಇಲ್ಲ. ಅಪ್ಪುವಿಗಾಗೇ ಬರೆದಂತ ಅದೆಷ್ಟೋ ಪುಟದ ಡೈಲಾಗ್ ಗಳನ್ನು ಬೇರೆಯವರ ಕೈಮೇಲೆ ಇಡಬೇಕಾಗಿ ಕೂಡ ಬಂತು. ಪುನೀತ್ ರಾಜಕುಮಾರ್ ಗೆ ಒಮ್ಮೆಯಾದರು ಒಂದು ಸಿನಿಮಾವನ್ನ ನಿರ್ದೇಶಿಸಬೇಕೆಂದು ಕನಸು ಕಂಡಿದ್ದ ಅದೆಷ್ಟೋ ನಿರ್ದೇಶಕರ ಕಂಗಳಿಗೆ ಮರಳೆರಚಿದಂತಾಯಿತು. ನಮ್ಮಗಲಿ ಹೋದ ಅಪ್ಪು ತಮ್ಮ ಜೊತೆಗೆ ಒಂದು ಹುರುಪಿನ ಮಹಾಸಾಗರವನ್ನೇ ಕರೆದುಕೊಂಡು ಹೋದರೆಂದರೆ ತಪ್ಪಾಗಲಾಗದು. ಈಗ ಇಂತಹ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯೊಂದಾಗಿದೆ.
ಕನ್ನಡದ ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ಅವರು ಪುನೀತ್ ರಾಜಕುಮಾರ್ ಗೆ ಸಿನಿಮಾವೊಂದನ್ನು ಮಾಡಲಿದ್ದಾರೆ, ಅಪ್ಪುವಿಗಾಗಿಯೇ ಕಥೆಯೊಂದನ್ನ ಹೆಣೆದಿಟ್ಟಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅಪ್ಪು ಅಭಿಮಾನಿಗಳಲ್ಲಂತು ಅಪಾರ ಆನಂದವನ್ನ ಈ ವಿಷಯ ತುಂಬಿತ್ತು. ಆದರೆ ದುರದೃಷ್ಟವಾಶಾತ್ ಇದು ಈಡೇರಲೇ ಇಲ್ಲ. ಸಿನಿಮಾ ಪ್ರಾರಂಭಕ್ಕೂ ಮುಂಚೆಯೇ ಅಂತ್ಯ ಕಂಡಂತಾಗಿತ್ತು ಅಪ್ಪು ಅಗಲಿಕೆಯಿಂದ. ಆದರೆ ಈಗ ಆ ಚಿತ್ರಕ್ಕೆ ಮರಳಿ ಜೀವಬಂದಿದೆ. ಅಪ್ಪುವಿಗಾಗಿ ಬರೆದ ಪಾತ್ರಕ್ಕೆ ನಟ ವಿರಾಟ್ ಬಣ್ಣ ಹಚ್ಚಲಿದ್ದಾರೆ.
ವಿರಾಟ್ ಎ ಪಿ ಅರ್ಜುನ್ ಅವರ ‘ಕಿಸ್’ ಸಿನಿಮಾದಿಂದ ಬೆಳ್ಳಿತೆರೆಗೆ ಕಾಲಿಟ್ಟವರು. ಮೊದಲ ಚಿತ್ರದಲ್ಲೇ ಹೆಸರು ಯಶಸ್ಸು ಎಲ್ಲವನ್ನು ಪಡೆದವರು. ಇನ್ನು ಹೆಸರಿಡದ ಈ ಹೊಸ ಸಿನಿಮಾ ವಿರಾಟ್ ಅವರ ಮೂರನೇ ಚಿತ್ರವಾಗಿರಲಿದೆ. ಮಾರ್ಚ್ 11ರಂದು ವಿರಾಟ್ ಜನುಮದಿನದ ಅಂಗವಾಗಿ ಪೋಸ್ಟರ್ ಒಂದನ್ನ ಬಿಡುಗಡೆಗೊಳಿಸಿತ್ತು ಚಿತ್ರತಂಡ.
ಜಯಣ್ಣ-ಭೋಗೇಂದ್ರ ಜೋಡಿಯ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಈ ಚಿತ್ರಕ್ಕೆ ಸದ್ಯ ಹೆಸರಿಡದ ಕಾರಣ, 24 ಎಂಬ ಅಂಕಿಯನ್ನು ಪೋಸ್ಟರ್ ನಲ್ಲಿ ಎದ್ದು ಕಾಣಿಸುವಂತೆ ಇರಿಸಲಾಗಿದೆ, ಕಾರಣ ಜಯಣ್ಣ-ಭೋಗೇಂದ್ರ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರೋ 24ನೇ ಚಿತ್ರ ಇದಾಗಿರುವುದು. ಅಲ್ಲದೇ ವಿರಾಟ್ ಗೆ ‘ಸ್ಟೈಲಿಶ್ ಪ್ರಿನ್ಸ್’ ಎಂದು ಈ ಪೋಸ್ಟರ್ ಕರೆಯುತ್ತದೆ. ಸದ್ಯ ಎ ಪಿ ಅರ್ಜುನ್ ಜೊತೆಗೆ ತಮ್ಮ ಎರಡನೇ ಚಿತ್ರವಾದ ‘ಅದ್ದೂರಿ ಲವರ್’ ಅನ್ನು ಮುಗಿಸಿರೋ ವಿರಾಟ್, ಹೊಸತಾಗಿ ಒಂದು ದೊಡ್ಡ ಸಿನಿಮಾವನ್ನೇ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.