ರಾಕಿಂಗ್ ಸ್ಟಾರ್ ಯಶ್ ಅನ್ನುವುದಕ್ಕಿಂತ ರಾಕಿ ಭಾಯ್ ಎಂದೇ ಪ್ರಪಂಚದಾದ್ಯಂತ ಚಿರಪರಿಚಿತರಾಗಿರುವವರು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಗಳಿಸಿತ್ತೋ ಅದಕ್ಕಿಂತ ಸ್ವಲ್ಪ ಹೆಚ್ಚೇ ಅಭಿಮಾನಿಗಳನ್ನ ಯಶ್ ಕೆಜಿಎಫ್ ಸಿನಿಮಾಗಳ ಮೂಲಕ ಪಡೆದಿದ್ದಾರೆ ಎಂದರೆ ತಪ್ಪಾಗದು. ಸದ್ಯ ರಾಕಿ ಭಾಯ್ ಮುಂದೆ ಯಾವ್ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆ, ಕುತೂಹಲ ಎಲ್ಲರನ್ನೂ ಆವರಿಸಿಕೊಂಡಿದೆ. ಈ ನಡುವೆಯೇ ಯಶ್ ಗೆ 100 ಕೋಟಿ ಸಂಭಾವನೆಯ ಆಫರ್ ಬಂದಿದೆಯಂತೆ.
ಇನ್ನು ಎಲ್ಲೂ ಅಧಿಕೃತ ಘೋಷಣೆ ಆಗದೆಯೇ ‘ಯಶ್19’ ಎಂಬ ಹೆಸರಿನ ಮೂಲಕ ಯಶ್ ಅವರ ಮುಂದಿನ ಸಿನಿಮಾ ಟ್ರೆಂಡಿಂಗ್ ನಲ್ಲಿದೆ. ಮೂಲಗಳು ಹಾಗು ಮಾತುಗಳ ಪ್ರಕಾರ ಈ ಚಿತ್ರವನ್ನು ‘ಮಫ್ತಿ’ ಸಿನಿಮಾ ಖ್ಯಾತಿಯ ನರ್ತನ್ ಅವರು ನಿರ್ದೇಶನ ಮಾಡಲಿದ್ದು, ‘ಕೆ ವಿ ಎನ್ ಪ್ರೊಡಕ್ಷನ್ಸ್’ ನಿರ್ಮಾಣ ಮಾಡಲಿದ್ದಾರೆ. ಇದೇ ಸಿನಿಮಾಗೆ ಪೂಜಾ ಹೆಗ್ಡೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ. ಆದರೆ ಸದ್ಯ ಸುದ್ದಿಯಲ್ಲಿರುವುದು ಈ ಸಿನಿಮಾವಲ್ಲ. ಬದಲಿಗೆ ತೆಲುಗಿನ ಹೆಸರಾಂತ ನಿರ್ಮಾಪಕ ದಿಲ್ ರಾಜು ಅವರ ಮುಂದಿನ ಸಿನಿಮಾ. ಇದೊಂದು ಪಾನ್ ಇಂಡಿಯನ್ ಸಿನಿಮಾ ಆಗಿರಲಿದ್ದು, ಸುಮಾರು 800ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದೆ. ಇದೇ ಸಿನಿಮಾಗge ಯಶ್ ಅವರಿಗೆ ನೂರು ಕೋಟಿಯ ಸಂಭಾವನೆಯ ಆಫರ್ ನೀಡಲಾಗಿದೆಯಂತೆ. ಈ ಬಗೆಗಿನ ಅಧಿಕೃತ ಘೋಷಣೆಗಳು ಇಬ್ಬರ ಕಡೆಯಿಂದಲೂ ಹೊರಬಿದ್ದಿಲ್ಲ.
ದಿಲ್ ರಾಜು ಹಾಗು ಯಶ್ ಮೊದಲಿನಿಂದಲೂ ಆಪ್ತರು. ತೆಲುಗಿನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿತರಣೆ ಮಾಡಿದ್ದು ಇದೇ ದಿಲ್ ರಾಜು ಅವರು. ಇದೀಗ ಅವರ ಹೊಸ ಚಿತ್ರವನ್ನ ಯಶ್ ಅವರಿಗೆ ನಿರ್ಮಾಣ ಮಾಡೋ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಯಶ್ ಅವರಿಗೆ ಅಭಿಮಾನಿಗಳು ಹೆಚ್ಚುತ್ತಿದ್ದಂತೆಯೇ ಅವರ ಮೇಲಿನ ನಿರೀಕ್ಷೆಗಳು ಸಹ ಹೆಚ್ಚುತ್ತಲೇ ಹೋಗುತ್ತಿದೆ. ಮುಂದೆ ಯಾವ್ ಸಿನಿಮಾ ಮಾಡುತ್ತಾರೆ? ಅದು ಪಾನ್-ಇಂಡಿಯಾ ಚಿತ್ರವಾ? ಹೇಗಿರಲಿದೆ? ಈ ರೀತಿಯ ಹಲವು ಪ್ರಶ್ನೆಗಳೂ ಎಲ್ಲರ ಮನದಲ್ಲಿದೆ. ಹಾಗಾಗಿ ಯಶ್ ಅವರ ಮುಂದಿನ ಹೆಜ್ಜೆಗೆ ಬಹಳ ತೂಕವಿದೆ.