ಕೆಜಿಎಫ್ ಚಾಪ್ಟರ್ 2 ಚಿತ್ರ ಸದ್ಯ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಹದಿನೈದು ದಿನದೊಳಗೆ 1000ಕೋಟಿ ಗಳಸಿ ಸಿನಿಮಾರಂಗದಲ್ಲಿ ಹೊಸ ದಾಖಲೆಗಳನ್ನ ಬರೆಯುತ್ತಿದೆ. ಈ ಚಿತ್ರದ ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ, ಸಂಗೀತ ನಿರ್ದೇಶಕ ಪ್ರತಿಯೊಬ್ಬರಿಗೂ ಎಲ್ಲೆಡೆ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಇನ್ನು ನಾಯಕನಟ ರಾಕಿ ಭಾಯ್ ಯಶ್ ಅಭಿಮಾನಿಗಳ ಬಗ್ಗೆ ಹೇಳುವ ಅವಶ್ಯಕತೆಯೇ ಇಲ್ಲ. ಕೆಜಿಎಫ್ ಚಾಪ್ಟರ್ 1 ಚಿತ್ರದಿಂದ ದೇಶದಾದ್ಯಂತ ಹುಟ್ಟಿಕೊಂಡ ಅಭಿಮಾನಿ ಬಳಗ, ಇದೀಗ ಇಡೀ ಪ್ರಪಂಚಕ್ಕೆ ವಿಸ್ತ್ರತವಾಗಿದೆ. ಯಶ್ ಕೆಜಿಎಫ್ ನ ಐದು ಆಧಾರ ಸ್ತಂಭಗಳ ಬಗ್ಗೆ ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.
ಕೆಜಿಎಫ್ ಚಿತ್ರಗಳ ಮುಖ್ಯ ಆಧಾರಸ್ತಂಭವೆಂದರೆ, ಅದರ ಸೃಷ್ಟಿಕರ್ತರೂ ಆದಂತಹ ನಿರ್ದೇಶಕ ಪ್ರಶಾಂತ್ ನೀಲ್. ಇವರ ಬಗ್ಗೆ ಹೇಳುತ್ತಾ,”ಪ್ರಶಾಂತ್ ನೀಲ್ ಕನ್ನಡಕ್ಕೆ ಒಂದು ದೊಡ್ಡ ಆಸ್ತಿ. ಅವರಿಗೆ ಅರಿವಿಲ್ಲದೆ ಅವರಲ್ಲಿ ಅಗಾಧ ಕಲೆಗಳು ಅಡಗಿವೆ. ಕೆಜಿಎಫ್ ಗಿಂತ ದೊಡ್ಡ ಮಟ್ಟದಲ್ಲಿ ಪ್ರಪಂಚದಾದ್ಯಂತ ಸದ್ದು ಮಾಡುವಂತ ಚಿತ್ರಗಳು ಭವಿಷ್ಯದಲ್ಲಿ ಅವರಿಂದ ಬರುತ್ತವೆ ಎನ್ನುವಲ್ಲಿ ನನಗಂತೂ ಅನುಮಾನವಿಲ್ಲ” ಎನ್ನುತ್ತಾರೆ.
ಈ ಯಶಸ್ಸಿನ ಎರಡನೇ ರೂವಾರಿ ನಿರ್ಮಾಪಕ ವಿಜಯ್ ಕಿರಗಂದೂರು ಅವರು. ಎರಡು ಭಾಗಗಳಲ್ಲೂ ಏನೂ ಕಡಿಮೆಯಾಗದಂತೆ ಚಿತ್ರವನ್ನ ನಿರ್ಮಿಸಿದ ಇವರ ಬಗ್ಗೆ “ವಿಜಯ್ ಕಿರಿಗಂದೂರು ಅವರು ಒಬ್ಬ ಗ್ರಾಮೀಣ ಪ್ರತಿಭೆ. ಹಳ್ಳಿಯಿಂದ ಬಂದು ಇಷ್ಟು ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ. ಕೆಜಿಎಫ್ ನ ಯಶಸ್ಸಿಗೆ ಇವರ ಶ್ರಮ ಹಾಗು ನಂಬಿಕೆಗಳು ಕಾರಣ.” ಎನ್ನುತ್ತಾರೆ ಯಶ್. ಇನ್ನು ಚಿತ್ರದ ಸಂಗೀತ ಮಾಂತ್ರಿಕ ರವಿ ಬಸ್ರುರು ಅವರ ಬಗ್ಗೆ ಹೇಳುತ್ತಾ, “ತಮ್ಮ ಹಳ್ಳಿಯಲ್ಲಿ ಒಂದು ಮ್ಯೂಸಿಕ್ ಸ್ಟುಡಿಯೋ ಕಟ್ಟುವ ಕನಸು ಹೊತ್ತು ಬಂದವರವರು. ಈಗ ಅದೇ ಸ್ಟುಡಿಯೋದಲ್ಲಿ ಕುಳಿತು ತಮ್ಮ ಕೆಲಸ ಮಾಡುತ್ತಿದ್ದಾರೆ. ಅಷ್ಟು ಸಾಧನೆಗಳನ್ನ ಮಾಡಿ ಯಶಸ್ಸು ಕಂಡಿದ್ದಾರೆ. ಅವರ ಬದುಕು ಇನ್ನು ಎತ್ತರಕ್ಕೆ ಸಾಗಲಿ ಎಂದು ಹಾರೈಸುತ್ತೇನೆ” ಎನ್ನುತ್ತಾರೆ ರಾಕಿಂಗ್ ಸ್ಟಾರ್.
ಛಾಯಾಗ್ರಾಹಕ ಭುವನ್ ಗೌಡ ಅವರು ಒಬ್ಬ “ಶ್ರಮಜೀವಿ” ಎಂದು ಹೆಮ್ಮೆಯಿಂದ ಹೇಳುವ ರಾಕಿ ಭಾಯ್, ಚಿತ್ರದ ಶೂಟಿಂಗ್ ಸೆಟ್ ಗಳ ಸೃಷ್ಟಿಕರ್ತ ಆರ್ಟ್ ಡೈರೆಕ್ಟರ್ ಶಿವು ಅವರನ್ನು ಹೊಗಳುತ್ತ “ಚಿಕ್ಕ ಪುಟ್ಟ ವಿಷಯಗಳನ್ನು ದೊಡ್ಡ ಮಟ್ಟದಲ್ಲಿ ಆಲೋಚಿಸಿ ಕೆಲಸ ಮಾಡುತ್ತಾರೆ, ಅದನ್ನ ನೀವು ನಮ್ಮ ಚಿತ್ರದ ಸೆಟ್ ಗಳನ್ನು ನೋಡಿಯೇ ತಿಳಿದುಕೊಳ್ಳಬಹುದು” ಎನ್ನುತ್ತಾರೆ. ಈ ಸಂಧರ್ಭದಲ್ಲಿ ಚಿತ್ರದ ಎಡಿಟರ್ ಅವರನ್ನೂ ಪ್ರಶಂಸಿದ್ದಾರೆ ಯಶ್.