ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಭಾರತೀಯ ಬಾಕ್ಸ್ ಆಫೀಸ್ ನ ‘CEO’ ಎಂದು ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದ್ದಾರೆ ಯಶ್. ಸದ್ಯ ತಮ್ಮ ವೃತ್ತಿಜೀವನದಲ್ಲಿ ಎತ್ತರಕ್ಕೆರಿರುವ ಇವರು, ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವವರು. ‘ಯಶೋಮಾರ್ಗ’ ಎಂಬ ತಂಡವೊಂದನ್ನು ಕಟ್ಟಿ, ಅದರ ಮೂಲಕ ಹಲವರು ಸಮಾಜಪರ ಕೆಲಸಗಳನ್ನು ಯಶ್ ಮಾಡಿದ್ದಾರೆ. ಈ ಹಿಂದೆ, ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಯತ್ತಲಿನ ಕೆಲಸಗಳನ್ನು ಮಾಡಿರುವ ಈ ‘ಯಶೋಮಾರ್ಗ’ ಸದ್ಯ ಇನ್ನೊಂದು ಒಳ್ಳೆಯ ಕೆಲಸವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಎಂಬಲ್ಲಿ ‘ಚಂಪಕ ಸರಸ್ಸು’ ಎಂಬ ಮನಮೋಹಕ ಕಲ್ಯಾಣಿಯಿದೆ. ಕೆಳದಿ ಸಂಸ್ಥಾನದ ಅರಸರಾದ ವೆಂಕಟಪ್ಪ ನಾಯಕರು ತಮ್ಮ ಪ್ರೇಯಸಿಯಾದ ಚಂಪಕ ಎಂಬುವರ ನೆನಪಿಗಾಗಿ ನಿರ್ಮಿಸಿದ ಈ ಕೆರೆಗೆ ಸುಮಾರು ನಾಲ್ಕು ಶತಮಾನಗಳ ಇತಿಹಾಸವಿದೆಯಂತೆ. ಆದರೆ ಕಾಲ ಕಳೆದಂತೆ ಕೆರೆ ತಮ್ಮ ಕಳೆಯನ್ನ ಕಳೆದುಕೊಳ್ಳುತ್ತಾ ಬಂದಿತ್ತು. ಆದರೆ ಈಗ ಈ ಕಲ್ಯಾಣಿ ಮರಳಿ ತನ್ನ ಹಳೆಯ ಹೊಳಪನ್ನು ಪಡೆದಿದೆ. ಇದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್ ಅವರ ನೇತೃತ್ವದ ‘ಯಶೋಮಾರ್ಗ’ ತಂಡ. ‘ಯಶೋಮಾರ್ಗ’ ತಂಡವು ಹೈದರಾಬಾದ್ ಮೂಲದ ‘ಫ್ರೀಡಂ ಆಯಿಲ್ ಅಸೋಸಿಯೇಷನ್’ ಸಂಸ್ಥೆಯ ಜೊತೆಗೆ ಕೈಜೋಡಿಸಿ ಸುಮಾರು ಒಂದು ವರ್ಷದ ಹಿಂದೆಯೇ ಕಲ್ಯಾಣಿಯ ಜೀರ್ಣೋದ್ದಾರ ಕಾರ್ಯಕ್ರಮವನ್ನು ಆರಂಭಿಸಿತ್ತು. ಹಿರಿಯ ಜಲಕಾರ್ಯಕರ್ತರಾದ ಶಿವಾನಂದ ಕಳವೆ ಅವರ ಮಾರ್ಗದರ್ಶನದಲ್ಲಿ ಈ ಕೆಲಸವನ್ನು ನಿರ್ವಹಿಸಿದ್ದು, ‘ವಿಶ್ವ ಪರಿಸರ ದಿನಾಚರಣೆ’ಯಾದ ಜೂನ್ 5ರಂದು ಕಲ್ಯಾಣಿಯನ್ನು ಲೋಕಾರ್ಪಣೆ ಮಾಡಲಾಗಿದೆ.
ಈ ಜನಪ್ರಿಯ ಚಂಪಕ ಸರಸ್ಸು ಕಲ್ಯಾಣಿಯ ಮಧ್ಯಭಾಗದಲ್ಲಿ ಶಿವನ ದೇವಾಲಯವೊಂದಿದೆ, ಹಾಗು ದೇವಾಲಯಕ್ಕೆ ಸಂಪರ್ಕವಾಗಿ ಕಲ್ಲಿನ ಹಾದಿ ಕೂಡ ಇದೆ. ಕಲ್ಯಾಣಿಯ ಸುತ್ತಲಿನ ಗೋಡೆಗಳಲ್ಲಿ ಕಲ್ಲಿನ ಕೆತ್ತನೆಗಳನ್ನು ಮಾಡಲಾಗಿದೆ. ಇಷ್ಟು ಸುಂದರ ಕಲ್ಯಾಣಿಯು ಜನಬಳಕೆ ಕಡಿಮೆಯಾದರಿಂದ ಕಳೆಗುಂದಿತ್ತು. ಸದ್ಯ ‘ಯಶೋಮಾರ್ಗ’ ತಂಡದ ಪರಿಶ್ರಮದಿಂದ ಕೆರೆ ಹಾಗು ಅದರ ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸಿ, ಶಿವಾನಂದ ಕಳವೆ ಅವರ ಮನವಿಯಂತೆ ಕೆರೆಗೆ ಮಣ್ಣಿನಿಂದಲೇ ಆವರಣ ಗೋಡೆಯನ್ನು ನಿರ್ಮಿಸಿ, ಕಲ್ಯಾಣಿಗೆ ಮೊದಲ ಕಳೆಯನ್ನ ಮರಳಿ ನೀಡಿದ್ದಾರೆ. ಜೂನ್ 5ರಂದು ದೇವಾಲಯಕ್ಕೆ ಪೂಜೆ ಹಾಗು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕಲ್ಯಾಣಿಯನ್ನು ಲೋಕಾರ್ಪಣೆ ಮಾಡಲಾಗಿದೆ.
“ಈ ಹಿಂದೆ ರಾಜ್ಯದಲ್ಲಿ ಹಾಳಾಗಿ ಹೋಗುವ ಕಡೆಗೆ ಸಾಗುತ್ತಿರೋ ಕಲ್ಯಾಣಿ ಹಾಗು ಕೆರೆಗಳ ಬಗ್ಗೆ ಯಶ್ ಅವರ ಬಗ್ಗೆ ಮಾತನಾಡುವಾಗ ಈ ಚಂಪಕ ಸರಸ್ಸು ಕಲ್ಯಾಣಿಯ ಬಗೆಗೂ ಚರ್ಚಿಸಲಾಗಿತ್ತು. ಈ ಬಗ್ಗೆ ಕಾಳಜಿಯಿರುವ ಯಶ್ ಅವರು ರಾಜ್ಯದ ಜಲಸೆಲೆಗಳು ಉಳಿಯಬೇಕು ಎಂಬ ದೃಷ್ಟಿಯಲ್ಲಿ ಈ ಜೀರ್ಣೋದ್ದಾರ ಕಾರ್ಯ ಮಾಡಿರುವುದು ಸಂತಸ ತಂದಿದೆ” ಎಂದಿದ್ದಾರೆ ಶಿವಾನಂದ ಕಳವೆ.