ನಮ್ಮ ದೇಶದಾದ್ಯಂತ ‘ರಾಕಿ ಭಾಯ್’ ಎಂದೇ ಖ್ಯಾತರಾಗಿರುವ ನಮ್ಮ ಕನ್ನಡದ ‘ರಾಕಿಂಗ್ ಸ್ಟಾರ್’ ಯಶ್ ಅವರು ಕೆಜಿಎಫ್ ಚಿತ್ರದಿಂದ ಪ್ರಪಂಚದಾದ್ಯಂತ ಪ್ರಸಿದ್ದರಾದವರು. ಆದರೆ ಇದಕ್ಕಿಂತಲೂ ಮೊದಲು ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನ ಯಶ್ ಅವರು ನೀಡಿದ್ದಾರೆ. ಅದರಲ್ಲಿ ಒಂದು ‘ಗೂಗ್ಲಿ’ ಸಿನಿಮಾ. 2013ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕನ್ನಡಿಗರ ಮನಗೆದ್ದು ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಇದೀಗ ಒಂಬತ್ತು ವರ್ಷಗಳ ಸಂಭ್ರಮದಲ್ಲಿರೋ ಈ ಸಿನಿಮಾ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿದೆ.
ಪವನ್ ಒಡೆಯರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ರೋಮ್ಯಾಂಟಿಕ್-ಕಾಮಿಡಿ ಸಿನಿಮಾ ಯಶ್ ಅವರ ಸಿನಿಪಯಣಕ್ಕೆ ಹೊಸ ತಿರುವು ನೀಡಿತ್ತು. ಸಿನಿಮಾದಲ್ಲಿನ ಅವರ ಲುಕ್, ನಟನೆ ಎಲ್ಲದರಿಂದ ಯಶ್ ಪ್ರಖ್ಯಾತಿ ಪಡೆದಿದ್ದರು. ಕೃತಿ ಕರಬಂಧ ನಾಯಕಿಯಾದರೆ, ಪ್ರಮುಖ ಪಾತ್ರಗಳಲ್ಲಿ ಅನಂತ್ ನಾಗ್, ಸುಧಾ ಬೆಳವಾಡಿ, ಸಾಧು ಕೋಕಿಲ ಮುಂತಾದವರು ನಟಿಸಿದ್ದರು. ಇದೀಗ ಪ್ರಖ್ಯಾತ ನಿರ್ಮಾಪಕ ಮಹೇಶ್ ದಾನಣ್ಣನವರ್ ಅವರು ಸಿನಿಮಾದ ರಿಮೇಕ್ ಹಕ್ಕನ್ನು ಕೊಂಡುಕೊಂಡಿದ್ದಾರೆ. ಹಿಂದಿ, ಗುಜರಾತಿ, ಪಂಜಾಬಿ ಹಾಗು ಮರಾಠಿ ಭಾಷೆಗಳಲ್ಲಿ ‘ಗೂಗ್ಲಿ’ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದಾರೆ. ಇದರ ಮಾತುಕತೆಗಳು ಸದ್ಯ ನಡೆಯುತ್ತಿದೆಯಷ್ಟೇ ಆದ್ದರಿಂದ ವಿವರವಾದ ಘೋಷಣೆಯನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ.
ಈ ಬಗ್ಗೆ ಮಾತನಾಡುವ ಮಹೇಶ್ ಅವರು, “ನನಗೆ ಕನ್ನಡ ಚಿತ್ರರಂಗದ ಜೊತೆಗೆ ಒಳ್ಳೆಯ ನಂಟಿದೆ. ಹಾಗೆಯೇ ಯಶ್ ಅವರ ಸಿನಿಪಯಣವನ್ನ ನಾನು ಹತ್ತಿರದಿಂದಲೇ ನೋಡಿಕೊಂಡು ಬಂದಿದ್ದೇನೆ. ಈಗ ಎಲ್ಲರೂ ಅವರನ್ನು ಒಬ್ಬ ಆಕ್ಷನ್ ಹೀರೋ ಆಗಿ ಸಂಭ್ರಮಿಸುತ್ತಿದ್ದಾರೆ. ಆದರೆ ಅವರು ನಟಿಸಿರೊ ಇಂತಹ ರೋಮ್ಯಾಂಟಿಕ್ ಸಿನಿಮಾಗಳು ಅವರ ಇನ್ನೊಂದು ಪರಿಯ ನಟನೆಯ ಬಗ್ಗೆ ಹೇಳುತ್ತವೆ. ಈ ಸಿನಿಮಾವನ್ನು ನೋಡದ ಕನ್ನಡಿಗರಲ್ಲದವರಿಗೆ ಬೇರೆ ಬೇರೆ ಭಾಷೆಗಳಲ್ಲಿ ಈ ಅದ್ಭುತ ಸಿನಿಮಾವನ್ನು ಚೆನ್ನಾಗಿ ತೋರಿಸುವ ಪ್ರಯತ್ನ ಮಾಡುತ್ತೇವೆ ” ಎಂದಿದ್ದಾರೆ.