ವರುಷಗಳ ಹಿಂದೆ ತೆರೆಕಂಡಂತಹ ‘ನೀರ್ದೋಸೆ’ ಸಿನಿಮಾ ಒಂದು ಹೊಸ ವರ್ಗದ ಅಭಿಮಾನಿಗಳನ್ನು ಹುಟ್ಟುಹಾಕಿತ್ತು ಎಂದರೆ ತಪ್ಪಾಗದು. ಹಾಸ್ಯಮಾಯವಾಗಿಯೇ ಸೂಕ್ಷ್ಮ ವಿಚಾರಗಳನ್ನು ಜನರಿಗೆ ಮುಟ್ಟಿಸಿದ್ದ ee ಸಿನಿಮಾ ಜನಮನ್ನಣೆ ಪಡೆದಿತ್ತು. ಇದೀಗ ಬಹುಪಾಲು ಅದೇ ತಂಡದವರೇ ಮಾಡಿರುವ ಹೊಸ ಸಿನಿಮಾ ‘ತೋತಾಪುರಿ’. ವಿಜಯ್ ಪ್ರಸಾದ್ ಅವರ ನಿರ್ದೇಶನದ ಈ ಚಿತ್ರ ಇದೀಗ ತನ್ನ ಬಿಡುಗಡೆ ದಿನಾಂಕವನ್ನು ಹೊರಹಾಕಿದೆ.
‘ತೋತಾಪುರಿ’ ಸಿನಿಮಾದ ಟ್ರೈಲರ್ ಹಾಗು ಹಾಡೊಂದು ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ‘ನೀರ್ದೋಸೆ’ಯಂತದ್ದೇ ಅಂಶಗಳು ಇದರಲ್ಲೂ ಇರುತ್ತವೆ ಎಂದು ಸಿನಿಪ್ರೇಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಅಲ್ಲದೇ ‘ನೀರ್ದೋಸೆ’ ಚಿತ್ರದ ಯಶಸ್ಸಿನ ಅವಿನಾಭವ ಅಂಗವಾಗಿರೋ ನವರಸ ನಾಯಕ ಜಗ್ಗೇಶ್ ಅವರೇ ಈ ಚಿತ್ರಕ್ಕೂ ನಾಯಕರು. ಅಲ್ಲದೆ ಅದಿತಿ ಪ್ರಭುದೇವ, ವೀಣಾ ಸುಂದರ್, ನಟರಾಕ್ಷಸ ಡಾಲಿ ಧನಂಜಯ ಮುಂತಾದ ಕನ್ನಡದ ಪ್ರಮುಖ ನಟ ನಟಿಯರು ಸಹ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅನೂಪ್ ಸೀಳಿನ ಸಂಗೀತ ಹಾಗು ಕೆ ಎ ಸುರೇಶ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರ ಇದೇ ಸೆಪ್ಟೆಂಬರ್ 30ರಂದು ತೆರೆಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಕುಳಿತುಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗಲು ಕಾಯುತ್ತಿರೋ ಪ್ರೇಕ್ಷಕರು ಸೆಪ್ಟೆಂಬರ್ 30ರಿಂದ ಈ ಹಾಸ್ಯಮಯ ಅನುಭವವನ್ನ ಪಡೆಯಬಹುದು. ಈ ಮೂಲಕ 2022ರಲ್ಲಿ ಬಿಡುಗಡೆಯಾಗುತ್ತಿರುವ ಡಾಲಿಯವರ ಐದನೇ ಸಿನಿಮಾ ಇದಾಗಿರಲಿದೆ.