ನಾಡಹಬ್ಬ ದಸರಾ ವೈಭವದ ಸಂಭ್ರಮ| ವಿಜಯದಶಮಿರಂದು ಬನ್ನಿ-ಬಂಗಾರ ಮುಡಿಯುವ ಸಡಗರ
“ನವ ದುರ್ಗೆಯರ ಆರಾಧನೆಯ ದಸರಾ ಹಬ್ಬ”
ದಸರಾ ವಿಶೇಷ ಲೇಖನ:
ಭಾರತೀಯರು ಹಬ್ಬಗಳಿಗೆ ವಿಶೇಷ ಮಹತ್ವ ನೀಡಿದ್ದಾರೆ. ಹಬ್ಬಗಳಲ್ಲಿ ದಸರಾ ಧಾರ್ಮಿಕ ಹಬ್ಬವನ್ನು ನಾಡಿನಾದ್ಯಂತ ಹಿಂದೂಗಳು ಅತ್ಯಂತ ಪ್ರಮುಖವಾಗಿ ಆಚರಿಸುತ್ತಾರೆ. ಶ್ರದ್ಧಾ-ಭಕ್ತಿ, ಶುದ್ಧ ಮನಸ್ಸಿನಿಂದ ಆರಾಸುವ ಪಾರಂಪರಿಕ ಪವಿತ್ರ ಹಬ್ಬವಾಗಿದೆ. ಈ ದಸರೆಯ ಒಂಬತ್ತು ದಿನಗಳ ಕಾಲ ನವ ಅವತಾರಗಳ ದುರ್ಗೆಯನ್ನು ಭಕ್ತರು ಆರಾಧಿಸಿ, ಹತ್ತನೇ ದಿನದಂದೇ ವಿಜಯ ದಶಮಿ(ದಸರಾ) ಹಬ್ಬವೆಂದು ಆಚರಿಸಲಾಗುತ್ತದೆ. ದಶ ದಿನಗಳ ವರೆಗೆ ಯುದ್ಧ ನಡೆಸಿ, ಮಹಿಷಾಸುರನನ್ನು ದುರ್ಗೆಯೂ ಸಂಹರಿಸಿದ ವಿಜಯದ ಸಂಕೇತವಾಗಿದೆ. ಒಂದೊಂದು ದಿನ ಒಂದೊಂದು ರೂಪದ ದೇವಿಯ ಪೂಜಿಸಿ, ಒಂದೊಂದು ರೀತಿಯ ವರ-ಫಲ ಪ್ರಾಪ್ತಿ ಮಾಡಿಕೊಳ್ಳುವುದು. ಸುಮಂಗಲೆಯರು ನಿತ್ಯವೂ ಮಡಿಯಿಂದ ಒಂಬತ್ತು ಕಾಲಗಳ ಉಪವಾಸವಿದ್ದು, ತಾಯಿ ಜಗನ್ಮಾತೆ ದುರ್ಗೆಯ ಆರಾಸುವುದು ಈ ಹಬ್ಬದ ಧಾರ್ಮಿಕ ವೈಶಿಷ್ಟವಾಗಿದೆ.
ದುರ್ಗೆಯ ಒಂಬತ್ತು ಅವತಾರಗಳು:
ದುರ್ಗಾ ಶೈಲಪುತ್ರಿ, ಬೃಹ್ಮಚಾರಿಣಿ, ಚಂದ್ರ ಘಂಟಾ, ಕುತ್ತಾಂಡಾ, ಸಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ದಿದಾತ್ರಿ ಹೀಗೆ ಒಂಬತ್ತು ಅವತಾರಗಳ ಮೂಲಕ ತನ್ನ ಆರಾಧಿಸುವ ಭಕ್ತರಿಗೆ ನವರಾತ್ರಿಯಲ್ಲಿ ದರ್ಶನ ಕೊಡುವಳು.
ಗ್ರಾಮೀಣ ದಸರಾ:
ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ವಿಜಯ ದಶಮಿಯ ಮುನ್ನ ದಿನದಂದು ಮಹಿಳೆಯರು ಬೆಳಗ್ಗಿನ ಜಾವವೇ ಎದ್ದು ಮಡಿಸ್ನಾನ ಮಾಡಿಕೊಂಡು ರಂಗು ರಂಗಿನ ಸೀರೆಯನ್ನು ತೊಟ್ಟು, ಬಂಗಾರದ ಆಭರಣಗಳಿಂದ ಅಲಂಕಾರಗೊಂಡು ಗ್ರಾಮದ ಮಾದರ ಮಾತಂಗಿಯ ಡೋಣಿಗೆ ತೆರಳಿ ವಿಶೇಷ ಪೂಜೆ, ಹಣ್ಣುಹಂಪಲಗಳ ನೈವೇದ್ಯ ಅರ್ಪಿಸುವದು. ಗ್ರಾಮೀಣ ಭಾಗದಲ್ಲಿ ಗತ ಕಾಲದಿಂದ ವಾಡಿಕೆಯಾಗಿ ಬಂದಿದೆ.
ಆಯುಧ ಪೂಜೆ:
ವಿಜಯ ದಶಮಿಯ ಮುನ್ನ ದಿನದಂದು ಆಯುಧ ಪೂಜೆಯನ್ನು ಮಾಡುವುದು ಸಂಪ್ರದಾಯವಾಗಿ ಬಂದಿದೆ. ಅಂದು ರಾಜ ಮಹಾರಾಜರು ತಮ್ಮ ಖಡ್ಗ, ಬಿಲ್ಲು-ಬಾಣ ಸೇರಿ ಆಯುಧಗಳನ್ನು ಬನ್ನಿ ಮಂಟಪದಲ್ಲಿಟ್ಟು ಪೂಜೆ ಮಾಡುತ್ತಿದ್ದರು. ಅದೇ ರೀತಿಯಲ್ಲಿ ಇಂದು ಜನರು ತಮ್ಮ ಮನೆಯಲ್ಲಿರುವ ಗುದ್ದುಲೆ, ಸನಿಕೆ, ಕೊಡಲಿ, ಸೈಕಲ್, ವಾಹನಗಳಿಗೆ ಬನ್ನಿ ಹಾಗೂ ವಿವಿಧ ಹೂವುಗಳನ್ನು ಇಟ್ಟು ವಿಶೇಷವಾಗಿ ಪೂಜಿಸುವರು.
ದಸರಾ(ವಿಜಯ ದಶಮಿ) ಸಂಭ್ರಮ:
ಹತ್ತನೇ ದಿನದಂದೇ ವಿಜಯ ದಶಮಿ ಮನೆ ಮನೆಗಳಲ್ಲೂ ಹೋಳಿಗೆ ಮಾಡಿ, ಶ್ರದ್ಧಾ-ಭಕ್ತಿಯಿಂದ ದುರ್ಗಾಶಕ್ತಿ ದೇವಿಗೆ ನೈವೇದ್ಯ ಅರ್ಪಿಸಿ, ಬಳಿಕ ನವರಾತ್ರಿಯ ಉಪವಾಸ ವೃತಾಚರಣೆ ಸಮಾಪ್ತಿಗೊಳಿಸಿ ಸುಮಂಗಲೆಯರು ಕುಟುಂಬದವರೊಂದಿಗೆ ಭೋಜನ ಸ್ವೀಕರಿಸುತ್ತಾರೆ.
ಸಾಯಂಕಾಲ 5 ಗಂಟೆ ಸುಮಾರಿಗೆ ಗ್ರಾಮ ಹಾಗೂ ಪಟ್ಟಣದ ಹಿರಿಯರ ಸಮ್ಮುಖದಲ್ಲಿ ಜನರೆಲ್ಲರೂ ಒಂದು ಸೇರಿ ಬನ್ನಿ ಮರದತ್ತ ತೆರಳಿ, ಬನ್ನಿ ಮರಕ್ಕೆ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುತ್ತದೆ. ಬಳಿಕ ತಾಯಿ-ತಂದೆ, ಸ್ನೇಹಿತರಿಗೆ, ಸಂಬಂಧಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು, ಬನ್ನಿ ಮುಡಿದು, ಬನ್ನಿ ಕೊಟ್ಟು ತೊಗೊಂಡು ಬಂಗಾರದ ಹಂಗ್ ಇರೋಣ, ಬನ್ನಿ ಬಂಗಾರವಾಗಲಿ ಪ್ರೀತಿ ಚಿರಕಾಲವಾಗಲಿ ಎನ್ನುವದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ.
ವರದಿ: ರೇವಣಸಿದ್ದ ಬಗಲಿ
(ಅಪ್ರೆಂಟಿಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ)