ನಟನಾಗಿ ಮಿಂಚಲಿರುವ ಕೊರಿಯೋಗ್ರಾಫರ್ ಸುಶಾಂತ್ ಪೂಜಾರಿ
ಬಾಲಿವುಡ್ ನಲ್ಲಿ ಕೊರಿಯೋಗ್ರಾಫರ್ ಆಗಿ ನಂತರ ನಟನಾಗಿ ಬದಲಾದ ಸುಶಾಂತ್ ಪೂಜಾರಿ ಇದೀಗ ಜುಲೈನಲ್ಲಿ ತೆರೆಕಾಣಲಿರುವ ‘ಚೇಸ್’ ಸಿನಿಮಾ ಮುಖಾಂತರ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ. ಈ ಚಿತ್ರವನ್ನು ವಿಲೋಕ್ ಶೆಟ್ಟಿ ನಿರ್ದೇಶಿಸಿದ್ದಾರೆ. ಉಡುಪಿ ಮೂಲದವರಾದ ಸುಶಾಂತ್ ಚಿತ್ರದ ಬಗ್ಗೆ ಮಾತನಾಡುತ್ತಾ ‘ಕೆಜಿಎಫ್ ಯಶಸ್ಸು ಗಳಿಸುವುದಕ್ಕಿಂತ ಮೊದಲೇ ನಾನು ಕನ್ನಡ ಸಿನಿಮಾಗಳ ದೊಡ್ಡ ಪ್ರೇಮಿ. ಕನ್ನಡ ಸಿನಿಮಾದಲ್ಲಿ ನಟಿಸುವುದು ನನ್ನ ಬಹುದೊಡ್ಡ ಆಸೆಯಾಗಿತ್ತು. ಅದು ಈಗ ಚೇಸ್ ನ ಮೂಲಕ ನೆರವೇರುತ್ತಿದೆ’ ಎಂದರು. ಚೇಸ್ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ವಿವರಿಸಿದ ಸುಶಾಂತ್ ‘ನಾನು ಇದರಲ್ಲಿ ರಾಧಿಕಾಳ ಗಂಡನಾಗಿ ನಟಿಸುತ್ತಿದ್ದೇನೆ. ಆ ಕ್ಷಣದಲ್ಲಿ ಜೀವಿಸುವ ಮತ್ತು ಯಾವುದರ ಬಗ್ಗೆಯೂ ಕಾಳಜಿ ವಹಿಸದ ಪಾತ್ರವದು. ನನ್ನ ಪಾತ್ರವು ಕಥೆಗೆ ಒಂದು ತಿರುವನ್ನು ತಂದು ಕೊಡುವುದಲ್ಲದೆ ಪ್ರೇಕ್ಷಕರಿಗೆ ಕುತೂಹಲವನ್ನು ಹುಟ್ಟಿಸುತ್ತದೆ. ನಾನು ಕನ್ನಡದಲ್ಲಿ ಕೆಲವು ಮಾತುಗಳನ್ನಷ್ಟೇ ಆಡಬಲ್ಲೆ. ಬೆನ್ನಿ ಡಯಾಲ್ ಹಾಗೂ ಕಾರ್ತಿಕ್ ಆಚಾರ್ಯ ಅವರು ಹಾಡಿರುವ ಶಲಲಾ ಲವ್ ಎನ್ನುವ ಹಾಡಿಗೂ ಹೆಜ್ಜೆ ಹಾಕಿದ್ದೇನೆ. ಇದರ ಶೂಟಿಂಗ್ ಮಂಗಳೂರಿನ ಕೆಲವು ಪ್ರಾಚೀನ ಸ್ಥಳಗಳಲ್ಲಿ ನಡೆದಿದೆ. ಅದೊಂದು ಸುಂದರ ದೃಶ್ಯ ಹಾಗೂ ನಾನು ಅದರ ಕೊರಿಯೋಗ್ರಾಫಿ ಮಾಡಿದ್ದೇನೆ’ ಎಂದರು. ಜೊತೆಗೆ ಸೆಟ್ ನಲ್ಲಿ ರಾಧಿಕಾ ನಾರಾಯಣ್ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡ ಸುಶಾಂತ್ ‘ಅವರೊಬ್ಬ ಅದ್ಭುತ ನಟಿ. ತುಂಬಾ ಬೇಗ ಹೊಂದಿಕೊಳ್ಳುವ ನಟಿ, ಹಾಗೆಯೇ ಅದ್ಭುತ ಡ್ಯಾನ್ಸರ್ ಕೂಡ ಹೌದು. ಶಾಲಲಾ ಲವ್ ಹಾಡಿನ ಚಿತ್ರೀಕರಣದ ವೇಳೆ ಸ್ಪಾಟ್ ಅಲ್ಲಿ ಡ್ಯಾನ್ಸ್ ಮಾಡುವಲ್ಲೂ ಯಶಸ್ವಿಯಾಗಿದ್ದಾರೆ’ ಎಂದು ಹೊಗಳಿದರು. ನಟನೆಯನ್ನು ತುಂಬ ಗಂಭೀರವಾಗಿ ಪರಿಗಣಿಸುವ ಸುಶಾಂತ್ ಕಿಶೋರ್ ಬಾಯ್ಝೋನ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಅರ್ಜುನ್’ ಗೂ ಸಹಿ ಹಾಕಿದ್ದಾರೆ. ‘ನನ್ನ ಕೆರಿಯರ್ ಒಬ್ಬ ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆಗಿ ಆರಂಭವಾದಂತದ್ದು. ಅದರಲ್ಲಿ ಯಶಸ್ಸನ್ನು ಕಂಡ ನನಗೆ ನಟನಾಗಿ ಹೊರಹೊಮ್ಮುವ ಅವಕಾಶ ಕೂಡ ಸಿಕ್ಕಿತು” ಎನ್ನುತ್ತಾರೆ. “ಕೊರಿಯೋಗ್ರಾಫಿಯನ್ನು ಬ್ಯಾಲೆನ್ಸ್ ಮಾಡುವ ಮೂಲಕ ಪೂರ್ಣ ನಟನಿಗೆ ಇಳಿದವನು ನಾನು. ಅಭಿನಯದಿಂದ ಜೀವನಕ್ಕೆ ಹಲವಾರು ಪಾಠಗಳು ಸಿಗುತ್ತವೆ. ಹಾಗೇ ಹೊಸಬರು ಪರಿಚಿತರಾದಂತೆ ಜೀವನದ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ನಾನು ನಾನು ಇದನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ’ ಎಂದು ಹೇಳುತ್ತಾರೆ ಸುಶಾಂತ್ ಪೂಜಾರಿ.
ನಟನಾಗಿ ಮಿಂಚಲಿರುವ ಕೊರಿಯೋಗ್ರಾಫರ್ ಸುಶಾಂತ್ ಪೂಜಾರಿ Read More »