ಅಕ್ಷಯ್ ಕುಮಾರ್ ಅಭಿನಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಪೃಥ್ವಿರಾಜ್’. ಮುಘಲರ ವಿರುದ್ಧ ವೀರವೇಶದಿಂದ ಹೋರಾಡಿ, ಭಾರತೀಯರು ಹೆಮ್ಮೆಯಿಂದ ತನ್ನ ಹೆಸರನ್ನು ನೆನಪಿಸಿಕೊಳ್ಳುವಂತೆ ಮಾಡಿದ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗುತ್ತಿದೆ. ಇದೇ ಜೂನ್ 3ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಸದ್ಯ ತನ್ನ ಶೀರ್ಷಿಕೆಯ ಕಾರಣದಿಂದ ಸುದ್ದಿಯಲ್ಲಿದೆ. ಹಿಂದಿ ಚಿತ್ರರಂಗದಲ್ಲಿ ಸುಮಾರು 50 ವರ್ಷಗಳಿಂದ ಸಿನಿಮಾಗಳನ್ನು ಮಾಡುತ್ತಾ, ಹಲವರು ಅದ್ಭುತ ಚಿತ್ರಗಳನ್ನು ನೀಡಿರೋ ಸಿನಿ ನಿರ್ಮಾಣ ಸಂಸ್ಥೆ, ‘ಯಶ್ ರಾಜ್ ಫಿಲಂಸ್’ ಅವರ ಬ್ಯಾನರ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ವೈಆರ್ ಎಫ್’ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಮೊದಲ ಐತಿಹಾಸಿಕ ಸಿನಿಮಾ ಇದಾಗಿದ್ದು, ಚಿತ್ರವನ್ನ ಭರ್ಜರಿಯಾಗಿ ಸಿದ್ದಪಡಿಸಲಾಗಿದೆ. ಆದರೆ, ಸಿನಿಮಾದ ಹೆಸರಿನ ಬಗ್ಗೆ ಹಲವು ತಕರಾರುಗಳನ್ನು ಚಿತ್ರತಂಡ ಎದುರಿಸಬೇಕಾಗಿತ್ತು. ‘ಪೃಥ್ವಿರಾಜ್’ ಎಂದು ಇಟ್ಟಿದ್ದ ಹೆಸರನ್ನು ಬದಲಿಸಬೇಕೆಂದು ರಜಪೂತರ ‘ಕರಣಿ ಸೇನೆ’ ಚಿತ್ರತಂಡಕ್ಕೆ ಷರತ್ತು ಹಾಕಿತ್ತು. “ಕೇವಲ ‘ಪೃಥ್ವಿರಾಜ್’ ಎಂಬ ಹೆಸರು ಸಾಲದು, ಸಾಮ್ರಾಟರಿಗೆ ಗೌರವ ಸಲ್ಲಿಸಲು ‘ವೀರಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ ಎಂದು ಸಂಪೂರ್ಣ ಹೆಸರಿಟ್ಟು, ಸಿನಿಮಾ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಬಿಡುಗಡೆಯನ್ನು ತಡೆಯುತ್ತೇವೆ” ಎಂದು ತಕರಾರು ತೆಗೆದಿದ್ದರು ‘ಕರಣಿ ಸೇನೆ’. ಈ ರೀತಿಯ ಘಟನೆ ಬಾಲಿವುಡ್ ಗೆ ಹೊಸತಲ್ಲ. ಈ ಹಿಂದೆ ಸಂಜಯ್ ಲೀಲಾ ಭನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಪದ್ಮಾವತ್’ ಚಿತ್ರದ ಶೀರ್ಷಿಕೆಯ ಬಗೆಗೂ ಖಂಡನೆ ಒಡ್ಡಿತ್ತು ಕರಣಿ ಸೇನೆ. ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಹಾಗು ರಣ್ವೀರ್ ಸಿಂಗ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾಗೆ ಆರಂಭದಲ್ಲಿ ‘ಪದ್ಮಾವತಿ’ ಎಂದು ಹೆಸರಿಡಲಾಗಿತ್ತು. ಆದರೆ ಕರಣಿ ಸೇನೆಯ ಒತ್ತಾಯದ ಮೇರೆಗೆ ಹೆಸರನ್ನು ‘ಪದ್ಮಾವತ್’ ಎಂದು ಬದಲಾವಣೆ ಮಾಡಲಾಯಿತು. ಹೀಗಾದರೂ ಕೆಲವೆಡೆ ಸಿನಿಮಾ ಬಿಡುಗಡೆಯನ್ನು ತಡೆಯಲಾಗಿತ್ತು. ತಮ್ಮ ಇತಿಹಾಸಕ್ಕೆ ಮೋಸವಾಗುತ್ತಿದೆ ಎಂಬ ಒಂದು ಸಣ್ಣ ಭಾವನೆ ಬಂದರೂ ಸಹ ಹೋರಾಟಕ್ಕಿಳಿಯುತ್ತಿದೆ ಕರಣಿ ಸೇನೆ. ಹಾಗಾಗಿ ಬಾಲಿವುಡ್ ಗೆ ಈ ಸಂಘಟನೆ ಒಂದು ಸಿಂಹಸ್ವಪ್ನದಂತಾಗಿದೆ. ‘ಕರಣಿ ಸೇನೆ’ಯ ಹೇಳಿಕೆಯ ಮೇರೆಗೆ ‘ವೀರಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ ಎಂಬ ಅಷ್ಟು ದೊಡ್ಡ ಹೆಸರಿಡುವುದು ವ್ಯಾಪಾರದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನಿರ್ಧರಿಸಿದ ‘ವೈಆರ್ ಎಫ್’ ಚಿತ್ರದ ಹೆಸರನ್ನು ‘ಸಾಮ್ರಾಟ್ ಪೃಥ್ವಿರಾಜ್’ ಎಂದು ಬದಲಿಸಿಕೊಂಡಿದೆ. ಈ ಮೂಲಕ ‘ಸಾಮ್ರಾಟ್ ಪೃಥ್ವಿರಾಜ್’ ಎಂಬ ಹೆಸರಿನಲ್ಲಿ ಹಿಂದಿ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಪ್ರಪಂಚಾದಾದ್ಯಂತ ಜೂನ್ 3ರಂದು ಬಿಡುಗಡೆಗೊಳ್ಳಲಿದೆ ಅಕ್ಷಯ್ ಕುಮಾರ್ ಅವರ ಸಿನಿಮಾ.