Karnataka Bhagya

ಕ್ರೀಡೆ

ಒಂದಿಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಅಭಿಮಾನಿಗಳು!!!!

ಒಬ್ಬ ನಟನ ಅಭಿಮಾನಿಯಾದರೆ ಆತನ ಚಿತ್ರಕ್ಕೆ ಮೊದಲು ಓಡುವುದು ಸಾಮಾನ್ಯ. ಆಸಕ್ತಿಯೇ ಇಲ್ಲದಿರೋ ಸ್ನೇಹಿತರನ್ನ ಕೂಡ ಎಳೆದುಕೊಂಡು ಬಂದು ತಮ್ಮ ನೆಚ್ಚಿನ ನಟನ ಸಿನಿಮಾವನ್ನ ಕಣ್ತುಂಬಿಸಿಕೊಳ್ಳುವುದು ಸಹ ಒಂದು ರೀತಿ ಸಾಮಾನ್ಯ ಪ್ರಕ್ರಿಯೆಯೇ. ಆದರೆ ತಮಗಿಷ್ಟವಾದ ನಟನ ಸಿನಿಮಾಗಾಗಿ ಒಂದಿಡೀ ಚಿತ್ರಮಂದಿರದಲ್ಲಿರೋ ಎಲ್ಲ ಸೀಟುಗಳನ್ನು ಖರೀದಿಸಿದರೆ, ಆ ಅಭಿಮಾನಕ್ಕೆ ಏನೆನ್ನಬಹುದು. ಇಂತಹ ಒಬ್ಬ ಅಭಿಮಾನಿ ಈಗ ಪತ್ತೆಯಾಗಿದ್ದಾರೆ. ದಕ್ಷಿಣ ಭಾರತದ ಬಹುನಿರೀಕ್ಷಿತ ಪಾನ್-ಇಂಡಿಯನ್ ಸಿನಿಮಾ RRR ಇದೇ ಮಾರ್ಚ್ 25ರಂದು ತೆರೆಕಾಣುತ್ತಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಟೋಲಿವುಡ್ ನ ದಿಗ್ಗಜ ಸ್ಟಾರ್ ಗಳಾದ ಜೂನಿಯರ್ ಎನ್ ಟಿ ಆರ್ ಹಾಗು ರಾಮಚರಣ್ ಒಟ್ಟಿಗೆ ನಟಿಸಿ ‘ಬಾಹುಬಲಿ’ಯಿಂದ ಜಗದ್ವಿಖ್ಯಾತರಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಈ ಚಿತ್ರದ ಪ್ರೀಮಿಯರ್ ಶೋಗಳ ಟಿಕೆಟಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದ್ದು, ದೇಶವಿದೇಶಗಳಲ್ಲಿ ಈಗಾಗಲೇ ಬಹುಪಾಲು ಟಿಕೆಟ್ ಗಳು ಹಂಚಿಕೆಯಾಗಿ ಹೋಗಿವೆ. ಈ ನಡುವೆ ಅಮೇರಿಕಾದಲ್ಲಿರುವ ಜೂನಿಯರ್ ಅಭಿಮಾನಿ ಬಳಗವೊಂದು RRR ಪ್ರೀಮಿಯರ್ ಶೋಗೆ ಸಿನಿಮಾದಿರದಲ್ಲಿರೋ ಎಲ್ಲ ಆಸನಗಳನ್ನು ಖರೀದಿಸಿದೆ. ಅಲ್ಲಿನ ಫ್ಲೋರಿಡಾದಲ್ಲಿರೋ “Cinemark Tinseltown” ಚಿತ್ರಮಂದಿರದಲ್ಲಿ ಸಂಜೆ 6ಗಂಟೆಗೆ ಗೊತ್ತಾಗಿರೋ ಚಿತ್ರಮಂದಿರದಲ್ಲಿನ ಎಲ್ಲ ಟಿಕೆಟ್ಗಳನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ತಮ್ಮ ನಟನ ಬಗ್ಗೆ ಹಾಗೇ ಅವರ ಚಿತ್ರದ ಬಗೆಗಿನ ಅಭಿಮಾನವನ್ನ ಹೊರಹಾಕಿದ್ದಾರೆ. RRR ಭಾರತದಾದ್ಯಂತ ಬಹುನಿರೀಕ್ಷಿತ ಸಿನಿಮಾವಾಗಿದೆ. ಜ್ಯೂನಿಯರ್ ಎನ್ ಟಿ ಆರ್, ರಾಮಚರಣ್ ಜೊತೆಗೆ ಅಜಯ್ ದೇವಗನ್, ಆಲಿಯಾ ಭಟ್, ಶ್ರೀಯ ಶರಣ್ ಮುಂತಾದ ದೊಡ್ಡ ಹೆಸರುಗಳು ತಾರಾಬಳಗದಲ್ಲಿದೆ. ಇದೇ ಮಾರ್ಚ್ 25ರಿಂದ RRR ತನ್ನ ಗರ್ಜನೆಯನ್ನ ಬೆಳ್ಳಿತೆರೆ ಮೇಲೆ ಆರಂಭಿಸಲಿದೆ.

ಒಂದಿಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಅಭಿಮಾನಿಗಳು!!!! Read More »

ಹಾಲಿವುಡ್ ಗೆ ಕಾಲಿಡಲಿದ್ದಾರೆ ಆಲಿಯಾ ಭಟ್

ಬಾಲಿವುಡ್ ನಲ್ಲಿ ಗಂಭೀರ ಛಾಪು ಮೂಡಿಸಿರೋ ಕೆಲವೇ ಕೆಲವು ನಟಿಮಣಿಯರಲ್ಲಿ ಮುಂಚೂಣಿಯಲ್ಲಿರುವವರ ಪೈಕಿ ಆಲಿಯಾ ಭಟ್ ಕೂಡ ಒಬ್ಬರು. ತಮ್ಮ ನಟನೆಯ ಮೂಲಕ ತಮ್ಮದೇ ಆದ ಒಂದು ಸ್ಥಾನವನ್ನ ಆಲಿಯಾ ಭಟ್ ಈಗಾಗಲೇ ಹಿಂದಿಯಲ್ಲಿ ಕಂಡುಕೊಂಡಿದ್ದಾರೆ. ರಾಜಾಮೌಳಿಯವರ RRR ಮೂಲಕ ತೆಲುಗು ಸಿನಿಮಾರಂಗಕ್ಕೂ ಕಾಲಿಟ್ಟಿರೋ ಆಲಿಯಾ ಭಟ್, ಟೋಲಿವುಡ್ ನ ಪ್ರೇಕ್ಷಕರ ಕಣ್ಣುಕುಕ್ಕಲು ಕಾಯುತ್ತಿದ್ದಾರೆ. ಇದಷ್ಟೇ ಅಲ್ಲದೇ ಆಲಿಯಾಗೆ ಇದೀಗ ಇಂಗ್ಲೀಷ್ ಸಿನಿಮಾವೊಂದರಿಂದ ಕೂಡ ಅವಕಾಶ ಬಂದಿದ್ದು ಇನ್ನೇನು ಕೆಲವೇ ಸಮಯದಲ್ಲಿ ಅವರ ಭಾಗದ ಚಿತ್ರೀಕರಣ ಆರಂಭವಾಗಲಿದೆಯಂತೆ. ‘ವಂಡರ್ ವಿಮೆನ್’ ಚಿತ್ರಗಳಿಂದ ಪ್ರಪಂಚಾದಾದ್ಯಂತ ಪ್ರಸಿದ್ಧಿ ಪಡೆದಿರೋ ಗಲ್ ಗಡೊಟ್ ಜೊತೆಗೆ ಆಲಿಯಾ ಬಣ್ಣ ಹಚ್ಚಲಿದ್ದಾರೆ. ನೆಟ್ ಫ್ಲಿಕ್ಸ್ ನಿರ್ಮಾಣ ಮಾಡಲಿರೋ ‘ಹಾರ್ಟ್ ಒಫ್ ಸ್ಟೋನ್’ ಅನ್ನುವಂತ ರೋಮಾಂಚಕ ಥ್ರಿಲರ್ ಕಥೆಯೊಂದಿಗೆ ಆಲಿಯಾ ಹಾಲಿವುಡ್ ಮೆಟ್ಟಿಲೇರಲಿದ್ದಾರೆ. ಹೆಸರಾಂತ ನಿರ್ದೇಶಕ ಟಾಮ್ ಹಾರ್ಪೆರ್ ನೇತೃತ್ವದಲ್ಲಿ ಮೂಡಿಬರಲಿರೋ ಈ ಚಿತ್ರದಲ್ಲಿ ಆಲಿಯಾ ಹಾಗು ಗಲ್ ಗಡೊಟ್ ಜೊತೆಗೆ ‘ಫಿಫ್ಟಿ ಶೇಡ್ಸ್ ಒಫ್ ಗ್ರೇ’ ಖ್ಯಾತಿಯ ಜಾಮೀ ಡೋರ್ನನ್ ಕೂಡ ತೆರೆಮೇಲೆ ಕಾಣಲಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನ ಸಂತಸಭರಿತ ಅಚ್ಚರಿಯ ಮಾದರಿಯಲ್ಲಿ ನೆಟ್ ಫ್ಲಿಕ್ಸ್ ಹಂಚಿಕೊಂಡಿದೆ. ಆಲಿಯಾ ನಟನೆಯ ‘ಗಲ್ಲಿ ಬಾಯ್'(2019), ‘ಹೈವೇ'(2014) ಚಿತ್ರಗಳು ಬರ್ಲಿನೆಲ್ ನಲ್ಲಿ ತಮ್ಮ ಪ್ರೀಮಿಯರ್ ಶೋ ಪಡೆದಿದ್ದವು. ಇತ್ತೀಚಿಗಷ್ಟೇ ತೆರೆಕಂಡು ಸದ್ಯ ಚಿತ್ರಮಂದಿರಗಳನ್ನಾಳುತ್ತಿರುವ ‘ಗಂಗೂಭಾಯ್ ಕಥಿಯಾವಾಡಿ’ ಸಿನಿಮಾ ಕೂಡ ಬೆರ್ಲಿನ್ ನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತನ್ನ ಪ್ರೀಮಿಯರ್ ಶೋವನ್ನು ಬಿಡುಗಡೆಗೊಳಿಸಿತ್ತು. ಅಲ್ಲದೇ “ಗಲ್ಲಿ ಬಾಯ್” ಚಿತ್ರವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಕೂಡ ಕಳಿಸಲಾಗಿತ್ತು. ಪ್ರಸ್ತುತ ಆಲಿಯಾ ಭಟ್ ಅನ್ನು ಈ ಹೊಸ ಚಿತ್ರದಲ್ಲಿ ಸೇರಿಸಿಕೊಂಡಿರುವುದು ಭಾರತೀಯ ಸಿನಿರಸಿಕರಲ್ಲಿ ಒಂದಿಷ್ಟು ಹೆಮ್ಮೆಯನ್ನಂತು ತಂದಿದೆ.

ಹಾಲಿವುಡ್ ಗೆ ಕಾಲಿಡಲಿದ್ದಾರೆ ಆಲಿಯಾ ಭಟ್ Read More »

ಇನ್ಮುಂದೆ ನಿಮ್ಮ ಅಂಗೈಯಲ್ಲೇ ಸಿಗಲಿದೆ ರಶ್ಮಿಕಾ ಬಗ್ಗೆ ಕಂಪ್ಲೀಟ್ ಮಾಹಿತಿ

ನಟಿ ರಶ್ಮಿಕಾ ಮಂದಣ್ಣ ಸದ್ಯ ಸ್ಯಾಂಡಲ್ ವುಡ್ ಸ್ಟಾರ್ ಆಗಿ ಮಾತ್ರವಲ್ಲದೆ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟಿ …ಟಾಲಿವುಡ್,ಕಾಲಿವುಡ್ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ …ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನಂತರವಂತೂ ರಶ್ಮಿಕಾ ವರ್ಚಸ್ಸು ಬದಲಾಗಿ ಹೋಗಿದೆ .. ರಶ್ಮಿಕಾ ಸ್ಟೈಲ್, ಮ್ಯಾನರಿಸಂ, ಔಟ್ ಫಿಟ್ ಪ್ರತಿಯೊಂದು ಕೂಡ ಅಭಿಮಾನಿಗಳನ್ನು ಆಕರ್ಷಣೆ ಮಾಡುತ್ತಿದ್ದು ಅವರ ಫಿಟ್ನೆಸ್ ಹಾಗೂ ಸ್ಟೈಲ್ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾತುರರಾಗಿರುತ್ತಾರೆ ..ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಹಾಗೂ ತಮ್ಮ ಫ್ಯಾಮಿಲಿ ಸಿನಿಮಾ ಬಗ್ಗೆ ಆಗಾಗ ಮಾಹಿತಿ ನೀಡುತ್ತಿರುತ್ತಾರೆ ರಶ್ಮಿಕಾ…ಈಗ ಅವರ ಬಗ್ಗೆ ಮತ್ತಷ್ಟು ಮಾಹಿತಿ ಕೊಡುವ ಕಾರಣದಿಂದಾಗಿ ತಮ್ಮದೇ ಆದ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ … ತಮ್ಮ ಯೂಟ್ಯೂಬ್ ಚಾನಲ್ ಆರಂಭ ಮಾಡಿ ಸಣ್ಣದೊಂದು ವಿಡಿಯೋ ಅಪ್ಲೋಡ್ ಮಾಡಿರುವ ರಶ್ಮಿಕಾಗೆ ಈಗಾಗಲೇ ಲಕ್ಷಾಂತರ ಅಭಿಮಾನಿಗಳ ಯೂಟ್ಯೂಬ್ ನಲ್ಲಿ ಪ್ರೀತಿ ತೋರುತ್ತಿದ್ದಾರೆ ..ತಮ್ಮ ಟ್ರಾವೆಲಿಂಗ್, ಸಿನಿಮಾ, ಫಿಟ್ನೆಸ್, ಫುಡ್ ಮೇಲಿರುವ ಪ್ರೀತಿ ಹೀಗೆ ಎಲ್ಲಾ ವಿಚಾರವನ್ನು ರಶ್ಮಿಕಾ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳಲಿದ್ದಾರೆ ..

ಇನ್ಮುಂದೆ ನಿಮ್ಮ ಅಂಗೈಯಲ್ಲೇ ಸಿಗಲಿದೆ ರಶ್ಮಿಕಾ ಬಗ್ಗೆ ಕಂಪ್ಲೀಟ್ ಮಾಹಿತಿ Read More »

‘ಜುಗಲ್ ಬಂದಿ’ ಸಿನಿಮಾದ ಮೊದಲ ಹಾಡು ಬಿಡುಗಡೆ…

ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡ್ತಿರುವ ಜುಗಲ್ ಬಂದಿ ಸಿನಿಮಾ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಸುದ್ದಿ ಮಾಡುತ್ತಿದೆ. ರಿಲೀಸ್ ಗೂ ಮೊದಲೇ ಭಾರೀ ಮೊತ್ತಕ್ಕೆ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಿ ಗಮನಸೆಳೆದಿದ್ದ ಜುಗಲ್ ಬಂದಿ ಸಿನಿಮಾ ಅಂಗಳದಿಂದ ಮನಮುಟ್ಟುವ ಮೊದಲ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ. ಇಂಥವರ ಸಂತಾನ ಭಾಗ್ಯ ಎಂದು ಶುರುವಾಗುವ ಅದ್ಭುತ ಸಾಹಿತ್ಯ ಎಂತಹ ಕಲ್ಲು ಮನಸನ್ನು ಕರಿಸುವಂತಿದೆ. ನಿರ್ದೇಶಕ ದಿವಾಕರ್ ಅವರು ಪೊಣಿಸಿರುವ ಅರ್ಥಪೂರ್ಣ ಸಾಲುಗಳಿಗೆ ಪ್ರದ್ಯೋತನ್ ಸಂಗೀತದ ಕಿಕ್.. ಮಾನಸಿ ಸುಧೀರ್ ಅವರ ಅಭಿನಯದ ಮ್ಯಾಜಿಕ್.. ಎಸ್ ಕೆ ರಾವ್ ಕ್ಯಾಮೆರಾ ವರ್ಕ್.. ಡಾ.ವೈಕಂ ವಿಜಯಲಕ್ಷ್ಮೀ ಗಾಯನ ಎಲ್ಲವೂ ಅತ್ಯಧ್ಬುತವಾಗಿ ಮೂಡಿ ಬಂದಿದೆ. ತಾಯಿ ಹೃದಯವನ್ನು ವರ್ಣಿಸುವ ಈ ಹಾಡಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಅಲ್ಲು ರಘು ಸುಪುತ್ರಿ ಆರು ತಿಂಗಳ ಮಗು ಯುಕ್ತ ನಟಿಸಿದ್ದು, ಮನಸಿ ಸುಧೀರ್ ಅವರ ಮನೋಜ್ಞ ಅಭಿನಯ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ‘ಸೂಜಿದಾರ’, ‘ಸಲಗ’, ‘ಏಕ್ ಲವ್‌ ಯಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿರುವ ಯಶ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದು ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸುತ್ತಿದ್ದಾರೆ. ಉಳಿದಂತೆ ಅಶ್ವಿನ್ ರಾವ್ ಪಲ್ಲಕ್ಕಿ , ಸಂತೋಷ್ ಆಶ್ರಯ್ ನಟಿಸಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ಡಿಂಡಿಮ ಜುಗಲ್ ಬಂದಿ ಸಿನಿಮಾ ಮೂಲಕ ನಿರ್ದೇಶನಾಗಿ ಬಡ್ತಿ ಪಡೆದಿದ್ದಾರೆ. ಉಳಿದಂತೆ ಕೋ ಡೈರೆಕ್ಟರ್ ಆಗಿ ಬಾಲಕೃಷ್ಣ ಯಾದವ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂತೋಷ್, ಶ್ರೀನಿವಾಸ್,ಕೆಲಸ ನಿರ್ವಹಿಸಲಿದ್ದಾರೆ. ಡಿಂಡಿಮ ಕ್ರಿಯೇಷನ್ ನಡಿ ನಿರ್ಮಾಣವಾಗ್ತಿರುವ ಜುಗಲ್ ಬಂದಿ ಸಿನಿಮಾಗೆ ದಿವಾಕರ್ ಡಿಂಡಮ ನಿರ್ದೇಶನದ ಜೊತೆ ಬಂಡವಾಳ ಕೂಡ ಹಾಕಿದ್ದಾರೆ.

‘ಜುಗಲ್ ಬಂದಿ’ ಸಿನಿಮಾದ ಮೊದಲ ಹಾಡು ಬಿಡುಗಡೆ… Read More »

ಡಿಯರ್ ದಿಯಾದ ಮೊದಲ ಪೋಸ್ಟರ್ ಹಂಚಿಕೊಂಡ ಪೃಥ್ವಿ ಅಂಬರ್

2020ರಲ್ಲಿ ಬಿಡುಗಡೆಯಾದ ಕನ್ನಡದ ಸೂಪರ್ ಹಿಟ್ ಚಿತ್ರ “ದಿಯಾ” ದಲ್ಲಿ ಪೃಥ್ವಿ ಅಂಬರ್, ಖುಷಿ ರವಿ, ದೀಕ್ಷಿತ್ ಶೆಟ್ಟಿ ನಟಿಸಿದ್ದರು. ವಿಭಿನ್ನ ಕಥಾ ಹಂದರದ ಈ ಚಿತ್ರಕ್ಕೆ ದೇಶಾದ್ಯಂತ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಓಟಿಟಿಯಲ್ಲಿ ಯಶಸ್ಸು ಕಂಡಿದ್ದಲ್ಲದೇ ಹಲವು ಭಾಷೆಗಳಿಗೆ ಈ ಚಿತ್ರದ ರಿಮೇಕ್ ರೈಟ್ಸ್ ಖರೀದಿ ಆಯಿತು. ತೆಲುಗು ಹಾಗೂ ಮಲೆಯಾಳಂ ನಲ್ಲಿ ದಿಯಾ ಸಿನಿಮಾದ ಡಬ್ಬಿಂಗ್ ವರ್ಷನ್ ಬಂದವು. 2021ರಲ್ಲಿ ತೆಲುಗಿನಲ್ಲಿ “ಡಿಯರ್ ಮೇಘಾ” ಎಂಬ ಹೆಸರಿನಲ್ಲಿ ರಿಮೇಕ್ ಆಗಿದ್ದು ವೀಕ್ಷಕರ ಮನ ಸೆಳೆದಿತ್ತು. ಕನ್ನಡದಲ್ಲಿ ದಿಯಾ ಸಿನಿಮಾ ನಿರ್ದೇಶಿಸಿದ್ದ ಕೆ. ಎಸ್ ಅಶೋಕ ಅವರು ಇದೀಗ ಹಿಂದಿ ರಿಮೇಕ್ ನ್ನು ನಿರ್ದೇಶನ ಮಾಡುತ್ತಿದ್ದಾರೆ.‌ “ಡಿಯರ್ ದಿಯಾ” ಎಂಬ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ತ್ರಿಕೋನ ಪ್ರೇಮಕಥೆಯಲ್ಲಿ ಉಳಿದ ಎರಡು ಪ್ರಮುಖ ಪಾತ್ರಗಳಲ್ಲಿ ಹೊಸಬರು ಕಾಣಿಸಿಕೊಂಡಿದ್ದಾರೆ. ಪೃಥ್ವಿ ಅಂಬರ್ “ಡಿಯರ್ ದಿಯಾ” ಚಿತ್ರದ ಫಸ್ಟ್ ಲುಕ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. “ಡಿಯರ್ ದಿಯಾ ಚಿತ್ರದ ಪೋಸ್ಟರ್ ನ್ನು ಬಹಿರಂಗ ಪಡಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಸದ್ಯದಲ್ಲಿಯೇ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಇದು ದಿಯಾ ಸಿನಿಮಾದ ಹಿಂದಿ ರಿಮೇಕ್ ಆಗಿದೆ” ಎಂದು ಬರೆದುಕೊಂಡಿದ್ದಾರೆ. ಡಿಯರ್ ದಿಯಾ ಚಿತ್ರದಲ್ಲಿ ಮಿಹಿಕಾ ಖುಷ್ವಹಾ ಹಾಗೂ ಉಜ್ವಲ್ ಶರ್ಮಾ ಕಾಣಿಸಿಕೊಂಡಿದ್ದು ಕಮ್ಲೇಶ್ ಸಿಂಗ್ ಖುಷ್ವಹಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಡಿಯರ್ ದಿಯಾದ ಮೊದಲ ಪೋಸ್ಟರ್ ಹಂಚಿಕೊಂಡ ಪೃಥ್ವಿ ಅಂಬರ್ Read More »

ಪತ್ನಿಯಿಂದ ವಿಚ್ಛೇದನ ಪಡೆದ ಸ್ಟಾರ್ ನಿರ್ದೇಶಕ

ಇತ್ತೀಚಿನ ದಿನಗಳಲ್ಲಿ ಭಾರತೀಯ ಸಿನೆಮಾರಂಗದಲ್ಲಿ ವಿಚ್ಛೇದನ ಪಡೆಯುತ್ತಿರುವುದು ಹೆಚ್ಚಾಗುತ್ತಿದೆ …ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರೇ ವಿಚ್ಚೇದನ ಪಡೆದು ತಾವೇ ಇಷ್ಟಪಟ್ಟು ವಿವಾಹವಾಗಿದ್ದವರಿಂದ ದೂರವಾಗ್ತಿದ್ದಾರೆ…ಇತ್ತೀಚೆಗಷ್ಟೇ ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಪಡೆದುಕೊಂಡಿದ್ದರು.. ಅದಾದ ನಂತರ ನಟ ಧನುಷ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆದರು… ಈಗ ಕಾಲಿವುಡ್ ನ ಪ್ರಖ್ಯಾತ ನಿರ್ದೇಶಕ ನಿರ್ದೇಶಕ ಬಾಲ ಅವರು ಪತ್ನಿ ಮುತ್ತುಮಲಾರ್ (ಮಲಾರ್) ಜತೆ ವಿಚ್ಛೇದನ ಪಡೆದಿದ್ದಾರೆ. ಸದ್ಯ ಚಿತ್ರರಂಗದಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಇವರಿಬ್ಬರೂ ಈಗಾಗಲೇ 4 ವರ್ಷಗಳಿಂದ ಬೇರೆ ಬೇರೆ ವಾಸ ಮಾಡುತ್ತಿದ್ದರು… ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿದ್ದ ಕಾರಣ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದುಬಂದಿದೆ … 4ವರ್ಷದ ಹಿಂದೆಯೇ ವಿಚ್ಛೇದನ ಪಡೆಯಬೇಕು ಎಂದು ನಿರ್ಧರಿಸಿದ ಇವರು ನಂತರ ಒಟ್ಟಾಗಿ ಕಾಣಿಸಿಕೊಳ್ಳಲೇ ಇಲ್ಲ… ಬಾಲ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರೆ.. ಮಲರ್ ಸಂಗೀತಲೋಕದಲ್ಲಿ ಬ್ಯುಸಿ ಆದರು… ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿ ಕೆಲವು ಸಮಯ ಕಳೆದಿತ್ತು. ಮಾರ್ಚ್ 5ರಂದು ಇವರ ವಿಚ್ಛೇದನ ಅಧಿಕೃತವಾಗಿದೆ. ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದ ಕಾರಣ ಡಿವೋರ್ಸ್ ಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ …

ಪತ್ನಿಯಿಂದ ವಿಚ್ಛೇದನ ಪಡೆದ ಸ್ಟಾರ್ ನಿರ್ದೇಶಕ Read More »

‘ಶಕ್ತಿಧಾಮ’ದಲ್ಲೊಂದು ಶಾಲೆ; ನನಸಾಗಲಿದೆ ಅಪ್ಪು ಕನಸು.

ರಾಜ್ ಕುಟುಂಬ ಸಮಾಜಸೇವಾ ಕಾರ್ಯಗಳಿಗೆ ಹೆಸರುವಾಸಿ. ಈ ಕುಟುಂಬದ ಪ್ರತಿಯೊಂದು ಕುಡಿಗಳು ಸಹ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ಕೊಡುತ್ತಾ ಬಂದಿದ್ದಾರೆ. ಇವರ ಸಮಾಜಸ್ನೇಹಿ ಕೆಲಸಗಳಲ್ಲೊಂದು ಮೈಸೂರಿನಲ್ಲಿರುವ ‘ಶಕ್ತಿಧಾಮ’. ಸುಮಾರು 24 ವರ್ಷಗಳ ಸುದೀರ್ಘ ಇತಿಹಾಸ ಇರೋ ಈ ಶಕ್ತಿಧಾಮ ಬಡ ಹೆಣ್ಣುಮಕ್ಕಳಿಗೆ ವಸತಿ, ಊಟಗಳನ್ನು ಉಚಿತವಾಗಿ ನೀಡುತ್ತಿದೆ. ಇದೊಂದು ಮಹಿಳಾ ಪುನರ್ವಸತಿ ಹಾಗು ಅಭಿವೃದ್ಧಿ ಕೇಂದ್ರ ಎನ್ನಬಹುದು. ಶೀಘ್ರದಲ್ಲೇ ಈ ಶಕ್ತಿಧಾಮದಲ್ಲಿ ಶಾಲೆಯೊಂದು ನಿರ್ಮಾಣವಾಗಲಿದೆಯಂತೆ. 1998ರಲ್ಲಿ ನಿರ್ಮಿತವಾಗಿ, 2000ನೇ ಇಸವಿಯಲ್ಲಿ ಕಾರ್ಯೋನ್ಮುಖವಾದ ಈ ‘ಶಕ್ತಿಧಾಮ’ ಇಲ್ಲಿಯವರೆಗೆ ಸುಮಾರು 4000 ವಿದ್ಯಾರ್ಥಿನಿಯರ ಬದುಕಿಗೆ ಬೆಳಕಾಗಿದೆ. ಪ್ರಸ್ತುತ ಸುಮಾರು 150 ವಿದ್ಯಾರ್ಥಿನಿಯರಿರುವ ಈ ‘ಶಕ್ತಿಧಾಮ’ದಲ್ಲಿ ಶಾಲೆಯೊಂದನ್ನ ಕಟ್ಟಬೇಕೆಂಬುದು ಪುನೀತ್ ರಾಜಕುಮಾರ್ ಅವರ ಆಸೆಯಾಗಿತ್ತಂತೆ. ಶೀಘ್ರದಲ್ಲೇ ಈ ಕನಸು ಸರ್ಕಾರದ ಅನುದಾನದೊಂದಿಗೆ ನನಸಾಗಲಿದೆ. ಇತ್ತೀಚಿನ ಬಜೆಟ್ ಒಂದರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಶಕ್ತಿಧಾಮದಲ್ಲಿ ಶಾಲೆಯೊಂದನ್ನು ಕಟ್ಟಲು ಅನುದಾನವನ್ನು ಮೀಸಲಿಡುವುದಾಗಿ ಹೇಳಿದ್ದಾರೆ. ಈ ನಿರ್ಧಾರ ರಾಜ್ ಕುಟುಂಬಕ್ಕೆ ಸಂತಸ ತಂದಿದೆ. ರಾಜಕುಮಾರ್ ಹಾಗು ಪಾರ್ವತಮ್ಮ ರಾಜಕುಮಾರ್ ದಂಪತಿಗಳು ಕಟ್ಟಿದ ಈ ‘ಶಕ್ತಿಧಾಮ’ವನ್ನು ನಿಧಾನರಾಗುವವರೆಗೆ ಪಾರ್ವತಮ್ಮ ಮುಂದಾಳತ್ವದಲ್ಲಿ ನೋಡಿಕೊಳ್ಳುತ್ತಿದರಂತೆ. ಪಾರ್ವತಮ್ಮ ನಮ್ಮನ್ನಗಲಿದ ನಂತರ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ನಡೆಸಿಕೊಂಡು ಬಂದರು. ಕುಟುಂಬದ ಪ್ರತಿಯೊಬ್ಬರೂ ಸಹ ತಮ್ಮ ಸಂಪಾದನೆಯಲ್ಲೊಂದು ಪಾಲನ್ನು ಇದಕ್ಕಾಗಿ ಮೀಸಲಿಡುತ್ತಿದ್ದರು. ಅಪ್ಪು ಹಲವಾರು ಬಾರಿ ಈ ಶಕ್ತಿಧಾಮಕ್ಕೆ ಧನಸಹಾಯ ಮಾಡಿದ್ದರಂತೆ. ಶಿವಣ್ಣ ಒಮ್ಮೊಮ್ಮೆ ‘ಶಕ್ತಿಧಾಮ’ಕ್ಕೆ ಭೇಟಿಕೊಟ್ಟು ಮಕ್ಕಳೊಂದಿಗೆ ಆಡುತ್ತಿದರು, ಮಕ್ಕಳನ್ನ ಶೂಟಿಂಗ್ ಸ್ಥಳಕ್ಕೆ ಸಹ ಕರೆದೊಯ್ಯುತ್ತಿದರು. ಸದ್ಯ ಇಲ್ಲೊಂದು ಶಾಲೆಯಾದರೆ ಹಲವಾರು ಬಡವಿದ್ಯಾರ್ಥಿನಿಯರಿಗೆ ಅತೀವ ಸಹಾಯವಾಗಲಿದೆ.

‘ಶಕ್ತಿಧಾಮ’ದಲ್ಲೊಂದು ಶಾಲೆ; ನನಸಾಗಲಿದೆ ಅಪ್ಪು ಕನಸು. Read More »

ಬರೋಬ್ಬರಿ 7 ವರ್ಷಗಳ ನಂತರ ನಿರ್ದೇಶನಕ್ಕಿಳಿಯಲಿರೋ ಉಪ್ಪಿ!!

ಕನ್ನಡದಲ್ಲಿ ತಲೆಗೆ ಹುಳ ಬಿಡೋ ಪ್ರಕ್ರಿಯೆಯ ಅತಿ ಪ್ರಬಲ ರಾಯಭಾರಿ ಅಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ ಅವರು. ಸಿನಿಮಾದಿಂದ ಸಿನಿಮಾಗೆ, ಕಥೆಯಿಂದ ಕಥೆಗೆ, ಅವರು ಹೇಳೋ ಬುದ್ಧಿವಾದಗಳ ಜೊತೆಗೆ ಅವರ ಚಿತ್ರದಲ್ಲಿನ ವಿಭಿನ್ನ-ವಿಶೇಷ ರೀತಿಯ ಅಂಶಗಳು ಅತಿ ರಭಸವಾಗಿ ಹರಿದಾಡಿ ಜನರ ಮನದಲ್ಲುಳಿಯುತ್ತವೆ. ಅವರ ನಟನೆಯ ಸಿನಿಮಾಗಳಿಗಿಂತ ಒಂದು ಪಾಲು ಹೆಚ್ಚೇ ಅವರ ನಿರ್ದೇಶನದ ಚಿತ್ರಗಳಿಗೆ ಅಭಿಮಾನಿ ಬಳಗವಿದೆ. ಈ ‘ಬುದ್ದಿವಂತ’ನ ಕೊನೆಯ ನಿರ್ದೇಶನ 2015ರ ‘ಉಪ್ಪಿ2’. ಇದೀಗ ಸುಮಾರು 7 ವರ್ಷಗಳ ನಂತರ ಮತ್ತೊಮ್ಮೆ ನಿರ್ದೇಶಕನ ಕುರ್ಚಿಯಲ್ಲಿ ಕೂರುತ್ತಾರಂತೆ ಉಪ್ಪಿ. 2021ರ ಸೆಪ್ಟೆಂಬರ್ ಆಸುಪಾಸಿನಲ್ಲಿ ಮೂರು ನಾಮಗಳುಳ್ಳ, ನಿರ್ದೇಶಕರ ಜಾಗದಲ್ಲಿ ಉಪ್ಪಿಯ ಹೆಸರಿದ್ದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ನೈಜವೋ ಇಲ್ಲ ಅಭಿಮಾನಿಗಳ ಅಭಿಮಾನದ ಚಿಹ್ನೆಯೋ ಯಾರಿಗೂ ತಿಳಿಯಲಿಲ್ಲ. ಸ್ವತಃ ಉಪೇಂದ್ರ ಅವರು ಕೂಡ ಈ ಬಗ್ಗೆ ಒಂದು ಮಾತನ್ನು ಆಡಿರಲಿಲ್ಲ. ಹಾಗಾಗಿಯೋ ಏನೋ ಆ ಪೋಸ್ಟರ್ ಸದ್ದಿಲ್ಲದೇ ಎಲ್ಲರ ನೆನಪಿನಿಂದ ಮಾಸಿ ಹೋಯಿತು. ಆದರೆ ಉಪ್ಪಿ ಮತ್ತೊಮ್ಮೆ ನಿರ್ದೇಶನ ಮಾಡಲಿದ್ದಾರೆ ಎಂಬ ಕಲ್ಪನೆಯೇ ಜನರಲ್ಲಿ ಹೊಸ ಹುರುಪೊಂದನ್ನು ತುಂಬುತ್ತದೆ. ಅಂತದರಲ್ಲಿ ಈಗ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವರು ತಾನು ನಿರ್ದೇಶನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಇದೆ ಮಾರ್ಚ್ 11ನೆ ತಾರೀಕಿನ ಮಧ್ಯಾಹ್ನ 12:14ಕ್ಕೆ ಚಿತ್ರದ ಶೀರ್ಷಿಕೆಯನ್ನ ಜನರ ಮುಂದಿಡುವುದಾಗಿಯೂ ಹೇಳಿದ್ದಾರೆ. ಸದ್ಯ ಪ್ರೇಕ್ಷಕರೆಲ್ಲರೂ ಚಿತ್ರದ ಮುಂದಿನ ಮುಂದುವರೆದ ವಿಷಯಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಉಪೇಂದ್ರ ಅವರ ಬಿಡುಗಡೆಗಷ್ಟೇ ಬಾಕಿಯಿರುವ ಚಿತ್ರಗಳೇ ಹಲವಾರಿವೆ. ಈ ನಡುವೆ ಬಹಳ ಮೊದಲೇ ನಿರ್ದೇಶಕರಾದ ಶಶಾಂಕ್ ಅವರಿಗೆ ಉಪೇಂದ್ರ ಚಿತ್ರವೊಂದನ್ನು ಒಪ್ಪಿಕೊಂಡಿದ್ದರು. ಅದರ ಚಿತ್ರೀಕರಣ ಏಪ್ರಿಲ್ ಅಲ್ಲಿ ಸೆಟ್ಟೇರಲಿದೆ ಎಂದು ಶಶಾಂಕ್ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಉಪ್ಪಿ ನಿರ್ದೇಶನದ ಮುಂದಿನ ಚಿತ್ರ ಕೂಡ ಏಪ್ರಿಲ್ನಲ್ಲೆ ಸೆಟ್ಟೇರೋ ಸಾಧ್ಯತೆಗಳಿವೆಯಂತೆ. ಹಾಗಾದರೆ ಉಪ್ಪಿ ಒಮ್ಮೆಲೇ ಎರಡೆರಡು ಚಿತ್ರೀಕರಣಗಳಲ್ಲಿ ಬಣ್ಣ ಹಚ್ಚಬೇಕಾಗುತ್ತದೆ. ಉಪ್ಪಿ ನಿರ್ದೇಶನದ ಮುಂದಿನ ಚಿತ್ರದ ಯಾವುದೇ ಹೊಸ ವಿಷಯ ತಿಳಿದು ಸಂತೃಪ್ತರಾಗಬೇಕಾದರೆ, ಉಪ್ಪಿಯವರಿಗಾಗಿಯೇ ಕಾಯಬೇಕಾಗಿದೆ.

ಬರೋಬ್ಬರಿ 7 ವರ್ಷಗಳ ನಂತರ ನಿರ್ದೇಶನಕ್ಕಿಳಿಯಲಿರೋ ಉಪ್ಪಿ!! Read More »

ಕಿರುತೆರೆಯ ಹ್ಯಾಂಡ್ ಸಮ್ ಹುಡುಗನಿಗೆ ನಟನೆಯೇ ಉಸಿರು

ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಈತ ಆಯ್ದುಕೊಂಡದ್ದು ನಟನೆಯನ್ನು. ಅಂದ ಹಾಗೇ ನಾವು ಮಾತನಾಡುತ್ತಿರುವುದು ಕಿರುತೆರೆಯ ಹ್ಯಾಂಡ್ ಸಮ್ ನಟ ಧನುಷ್ ಗೌಡ ಅವರ ಬಗ್ಗೆ. ಅರೇ ಧನುಷ್ ಯಾರು ಅಂಥ ಯೋಚನೆ ಮಾಡ್ತಿದ್ದೀರಾ? ಅವರು ಬೇರಾರೂ ಅಲ್ಲ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯ ನಾಯಕ ವಿಜಯ್. ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿರುವ ಧನುಷ್ ಗೌಡ ನಟನಾಗಿದ್ದಾರೆ ಎಂದರೆ ಅದಕ್ಕೆ ಮಾವ ಮತ್ತೆ ತಮ್ಮ ಅವರೇ ಮುಖ್ಯ ಕಾರಣ. “ನೀನು ನೋಡೋದಕ್ಕೆ ಚೆನ್ನಾಗಿದ್ದೀಯಾ. ನೀನ್ಯಾಕೆ ನಟಿಸಬಾರದು? ಎಂದು ಕೇಳಿದರು. ಆ ಮಾತನ್ನೇ ಗಟ್ಟಿಯಾಗಿ ತೆಗೆದುಕೊಂಡ ಧನುಷ್ ಗೌಡ ನಟನಾಗುವ ನಿರ್ಧಾರ ಮಾಡಿದರು. ನಟನಾಗಬೇಕು ಎಂದರೆ ಕೊಂಚ ಮಟ್ಟಿಗೆ ನಟನೆಯ ಬಗ್ಗೆ ತಿಳಿದಿರಬೇಕು. ಇಲ್ಲ ನಟನೆಯ ಆಗು ಹೋಗುಗಳು ಅರಿತಿರಬೇಕು‌‌. ನಟನೆಯ ಕುರಿತಾದ ಸಣ್ಣ ಅನುಭವವೂ ಇರದ ಧನುಷ್ ಗೌಡ ನಾಗತಿಹಳ್ಳಿ ಅವರ ಟೆಂಟ್ ಸಿನಿಮಾ ಸೇರಿ ನಟನೆಯ ಆಳ ಅಗಲ ತಿಳಿದರು. ವಿಜಯ್ ಆಗಿ ಕಿರುತೆರೆಗೆ ಕಾಲಿಟ್ಟ ಧನುಷ್ ಕಡಿಮೆ ಅವಧಿಯಲ್ಲಿಯೇ ಮನೆ ಮಾತಾದರು. ” ಗೀತಾ ಧಾರಾವಾಹಿಯಲ್ಲಿ ನಾನು ನಾಯಕ ಆಗಿ ನಟಿಸುತ್ತಿದ್ದೇನೆ. ಮೊದಲ ಧಾರಾವಾಹಿಯಲ್ಲಿಯೇ ಪ್ರಮುಖ ಪಾತ್ರ ಸಿಕ್ಕಿದ್ದು ನಾನು ಈ ಧಾರಾವಾಹಿಯಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರ ಒಂದೇ ನಿಜ, ಆದರೆ ಈಗಾಗಲೇ ಹಲವು ಅವತಾರಗಳಿಗೆ ನಾನು ಜೀವ ತುಂಬಿದ್ದೇನೆ. ಹೀರೋ, ವಿಲನ್, ಪೂಜಾರಿ, ಹುಡುಗಿ ಹೀಗೆ ನಾನಾ ಅವತಾರದಲ್ಲಿ ನಟಿಸಿದ್ದು ಸಂತಸ ತಂದಿದೆ” ಎಂದು ಹೇಳುತ್ತಾರೆ ಧನುಷ್ ಗೌಡ. “ಮೊದಲ ದಿನದ ಶೂಟಿಂಗ್ ನ ಅನುಭವ ಅದ್ಭುತವಾಗಿತ್ತು. ಅದನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ನಟನಾಗುತ್ತೇನೆ ಎಂಬ ಖುಷಿ ಒಂದೆಡೆಯಾದರೆ, ನಟನೆ ಎಂಬುದು ಹೊಸತು. ಹೇಗೆ ನಟಿಸುವುದು ಎನ್ನುವ ಭಯವೂ ಕಾಡುತ್ತಿತ್ತು. ಆದರೆ ಧಾರಾವಾಹಿಯ ತಂಡದವರು ನೀಡಿದ ಪ್ರೋತ್ಸಾಹದಿಂದ ಎಲ್ಲವೂ ಸರಾಗವಾಗಿ ಸಾಗಿತು” ಎನ್ನುತ್ತಾರೆ ಧನುಷ್ ಗೌಡ. “ನಾನಿಂದು ವಿಜಯ್ ಆಗಿ ಗುರುತಿಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ನಮ್ಮ ಧಾರಾವಾಹಿ ತಂಡದ ನಿರ್ದೇಶಕ, ನಿರ್ಮಾಪಕರೇ ಕಾರಣ. ಕಲರ್ಸ್ ಕನ್ನಡ ವಾಹಿನಿಯವರಿಗೆ, ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಅದೆಷ್ಟೋ ಧನ್ಯವಾದ ಹೇಳಿದರೂ ಕಡಿಮೆ” ಎಂದು ಹೇಳುತ್ತಾರೆ ಧನುಷ್ ಗೌಡ.

ಕಿರುತೆರೆಯ ಹ್ಯಾಂಡ್ ಸಮ್ ಹುಡುಗನಿಗೆ ನಟನೆಯೇ ಉಸಿರು Read More »

ಅಪ್ಪುವನ್ನು ನೆನೆದು ಭಾವುಕರಾದ ಚಿಕ್ಕಣ್ಣ

ಆ ನಗು, ಆ ನಟನೆ, ಆ ನೃತ್ಯ, ಆ ವ್ಯಕ್ತಿತ್ವ. ಅಪ್ಪುವನ್ನು ಮರೆಯುವುದಾದರೂ ಹೇಗೆ. ಕನ್ನಡಿಗರೆಲ್ಲರ ಮನೆಯಲ್ಲಿ ಮನದಲ್ಲಿ ಅಪ್ಪು ಎಂದೇ ಚಿರಪರಿಚಿತರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗ ನಮ್ಮೊಂದಿಗಿಲ್ಲ. ಅವರು ನಾಯಕನಟನಾಗಿ ನಟಿಸಿದ ಕೊನೆಯ ಚಿತ್ರ “ಜೇಮ್ಸ್” ಇದೇ ಮಾರ್ಚ್ 17ರಂದು ಪ್ರಪಂಚದ ಹಲವೆಡೆ ಬಿಡುಗಡೆಯಾಗಲಿದೆ. ಸದ್ಯ ಚಿತ್ರತಂಡ ಬಿರುಸಿನಿಂದ ಪ್ರಚಾರ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಸಂದರ್ಶನಗಳಲ್ಲಿ ಭಾಗಿಯಾದ ಚಿತ್ರದ ಪ್ರತಿಯೊಂದು ನಟರು ಸಹ ಭಾವುಕರಾಗುತ್ತಿದ್ದಾರೆ. ಇವರಲ್ಲಿ ಚಿಕ್ಕಣ್ಣ ಸಹ ಒಬ್ಬರು. ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯನಟ ಚಿಕ್ಕಣ್ಣ ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರ ಸ್ನೇಹಿತನ ಪಾತ್ರವಹಿಸಿದ್ದಾರೆ. ಅಪ್ಪುವಿನ ಕೊನೆಯ ಚಿತ್ರದಲ್ಲಿ ಅವರ ಜೊತೆ ನಟಿಸುವ ಭಾಗ್ಯ ಪಡೆದ ಕೆಲವೇ ಕೆಲವು ಕಲಾವಿದರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಈಗಾಗಲೇ ‘ರಾಜಕುಮಾರ’, ‘ದೊಡ್ಡಮನೆ ಹುಡುಗ’, ‘ನಟಸಾರ್ವಭೌಮ’, ಮೊದಲಾದ ಚಿತ್ರಗಳಲ್ಲಿ ಪುನೀತ್ ಗೆ ಜೊತೆಯಾಗಿ ನಟಿಸಿರೋ ಚಿಕ್ಕಣ್ಣ ಪುನೀತ್ ಅವರೊಂದಿಗೆ ಒಳ್ಳೆಯ ಒಡನಾಟವನ್ನ ಹೊಂದಿದ್ದರು. ‘ಜೇಮ್ಸ್’ ಪ್ರಚಾರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಏನು ಹೇಳಬೇಕೋ ತಿಳಿಯುತ್ತಿಲ್ಲ. ಇಂತಹ ಪ್ರಚಾರ ಯಾವ ನಟನ ಬದುಕಿನಲ್ಲೂ ಆಗಬಾರದು. ಅಪ್ಪು ಅವರ ಕೊನೆಯ ಚಿತ್ರದಲ್ಲಿ ನಾವು ನಟಿಸಿರುವುದು, ನಮ್ಮ ಭಾಗ್ಯ ಎಂದು ಭಾವಿಸಿದ್ದೇವೆ. ಈ ಸಿನಿಮಾ ಕನ್ನಡದಲ್ಲಿ ಹೊಸದೊಂದು ಇತಿಹಾಸ ಬರೆಯುತ್ತದೆ. ಇದು ನನ್ನೊಬ್ಬನ ಮಾತಲ್ಲ, ಸಮಸ್ತ ಸಿನಿಪ್ರೇಕ್ಷಕರ ಮಾತು” ಎನ್ನುತ್ತಾರೆ. ಈ ವೇಳೆ ಅಪ್ಪುವಿನೊಂದಿಗಿನ ದಿನಗಳನ್ನು ನೆನೆದು ಕಣ್ತುಂಬಿಕೊಂಡರು ಚಿಕ್ಕಣ್ಣ. ಈ ಸಂಧರ್ಭ ಶಿವಣ್ಣ, ಸಂಗೀತ ನಿರ್ದೇಶಕ ಚರಣ್ ರಾಜ್, ನಿರ್ದೇಶಕರಾದ ಚೇತನ್ ಒಳಗೊಂಡಂತೆ ಚಿತ್ರತಂಡದವರು ಅಲ್ಲಿ ಸೇರಿದ್ದರು.

ಅಪ್ಪುವನ್ನು ನೆನೆದು ಭಾವುಕರಾದ ಚಿಕ್ಕಣ್ಣ Read More »

Scroll to Top