ಕರುನಾಡ ಜನತೆಯ ಮನಗೆದ್ದ ‘ಜೇಮ್ಸ್’ ಚಿತ್ರ ಈಗಲೂ ಚಿತ್ರಮಂದಿರಗಳನ್ನ ಜನರಿಂದ ತುಂಬಿಸುತ್ತಿದೆ. ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ಪರಿಪೂರ್ಣ ನಾಯಕನಟನಾಗಿ ಕಣ್ತುಂಬಿಕೊಳ್ಳಲು ರಾಜ್ಯದ ಎಲ್ಲ ಭಾಗಗಳಲ್ಲೂ ಜನರು ಸಾಲುಗಟ್ಟಿ ಚಿತ್ರಮಂದಿರಗಳನ್ನ ಸೇರಿದ್ದರು. ಈಗಲೂ ಸೇರುತ್ತಿದ್ದಾರೆ ಕೂಡ. ಅಪ್ಪು ಅಭಿನಯವನ್ನ, ಆಕ್ಷನ್-ಡಾನ್ಸ್ ಅನ್ನು ಅಪ್ಪಿಕೊಳ್ಳದವರೇ ಇರಲಿಲ್ಲ. ಈಗ ಚಿತ್ರತಂಡ ಸಿನಿಮಾದ ಒಟಿಟಿ ಬಿಡುಗಡೆಯ ವಿಚಾರವನ್ನ ಹೊರಹಾಕಿದೆ.
‘ಭರ್ಜರಿ’ ಖ್ಯಾತಿಯ ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದ ಸಂಪೂರ್ಣ ಚಿತ್ರೀಕರಣಕ್ಕೂ ಮುನ್ನವೇ ಅಪ್ಪು ನಮ್ಮನ್ನೆಲ್ಲ ಅಗಲಿದ್ದರು. ಆದರೂ ಚಿತ್ರತಂಡ ಬಹಳ ಪರಿಶ್ರಮದಿಂದ ಪ್ರೇಕ್ಷಕರೆದುರಿಗೆ ಒಂದು ಸಂಪೂರ್ಣ ಸಿನಿಮಾವಾಗಿ ಚಿತ್ರವನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಅಪ್ಪು ಅಗಲಿಕೆಯ ದುಃಖದಲ್ಲೂ, ಹಗಲಿರುಳು ಶ್ರಮಪಟ್ಟು ಅವರ ಜನ್ಮದಿನದಂದೇ ಚಿತ್ರವನ್ನ ಬೆಳ್ಳಿತೆರೆಗೆ ತಂದರು. ಅಭಿಮಾನಿಗಳು ಮಾತ್ರವಲ್ಲದೆ ಕನ್ನಡಿಗರೆಲ್ಲರೂ ಸಿನಿಮಾವನ್ನ ಕೊಂಡಾಡಿ ಸಂಭ್ರಮಿಸಿದ್ದರು. ಈಗ ಚಿತ್ರದ ಒಟಿಟಿ ಬಿಡುಗಡೆಗೆ ಮುಹೂರ್ತ ಗೊತ್ತಾಗಿದೆ. ಏಪ್ರಿಲ್ 14ರಂದು ‘ಸೋನಿ ಲಿವ್’ನಲ್ಲಿ ಸಿನಿಮಾ ಬಿಡುಗಡೆಯಗಲಿದ್ದು, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳ್, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲೂ ನೋಡಲು ಲಭ್ಯವಾಗಲಿದೆ.
ಅಭಿಮಾನಿಗಳ ಅಭಿಮಾನ ಮಾತ್ರವಲ್ಲದೆ ಬಾಕ್ಸ್-ಆಫೀಸ್ ನಲ್ಲೂ ‘ಜೇಮ್ಸ್’ ಧೂಳೆಬ್ಬಿಸಿತ್ತು. ಕಿಶೋರ್ ಪತಿಕೊಂಡ ಅವರ ‘ಕಿಶೋರ್ ಪ್ರೊಡಕ್ಷನ್ಸ್’ ನಿರ್ಮಾಣದಲ್ಲಿ ಮೂಡಿಬಂದ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾದರೆ, ರಂಗಾಯಣ ರಘು, ಚಿಕ್ಕಣ್ಣ, ತಿಲಕ್, ಶರತ್ ಕುಮಾರ್, ಶ್ರೀಕಾಂತ್ ಮೊದಲಾದ ದೊಡ್ಡ ದೊಡ್ಡ ಹೆಸರುಗಳು ತಾರಾಗಣದಲ್ಲಿತ್ತು. ಪ್ರಪಂಚಾದಾದ್ಯಂತ ಬಿಡುಗಡೆಯಗಿದ್ದ ಸಿನಿಮಾ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.