ಏಪ್ರಿಲ್ 9ರಂದು ಹೊಂಬಾಳೆ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿತ್ತು. ‘ನಾಳೆ(ಏಪ್ರಿಲ್ 10) ಬೆಳಿಗ್ಗೆ 11:15ಕ್ಕೆ ಸರಿಯಾಗಿ ದೊಡ್ಡ ಘೋಷಣೆಯೊಂದನ್ನು ಮಾಡಲಿದ್ದೇವೆ’ ಎಂದು ಬರೆದಿದ್ದ ಫೋಟೋ ಕೆಳಗೆ, ‘ಎರಡು ದೊಡ್ಡ ಕನಸುಗಳ ಮಹಸಂಗಮ, ಮನರಂಜನೆಯ ಹೊಸಪರ್ವದ ಆರಂಭ.’ ಎಂದು ಬರೆದುಕೊಂಡಿದ್ದರು. ಸದ್ಯ ಎಲ್ಲೆಡೆ ಪ್ರಚಾರಗೊಳ್ಳುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಅಥವಾ ಚಿತ್ರೀಕರಣದ ಘಟ್ಟದಲ್ಲಿರುವ ‘ಸಲಾರ್’ ಬಗೆಗೆ ಯಾವುದಾದರೂ ವಿಷಯವಿರಬಹುದೆಂದು ಊಹಿಸಿದ್ದ ಅಭಿಮಾನಿಗಳಿಗೆ ಅಚ್ಚರಿಯ ಜೊತೆ ಆನಂದವು ಕಾದಿತ್ತು.
ಪ್ರಪಂಚದ ಎಲ್ಲ ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಅತ್ಯಂತ ಶ್ರೀಮಂತ ‘ಐಪಿಎಲ್’. ಅಸಂಖ್ಯ ಪ್ರೇಕ್ಷಕರ ಅಭಿಮಾನದ ಜೊತೆಗೆ ಮನರಂಜನೆಯ ಸಾಗರವನ್ನ ಮುನ್ನಡೆಸುತ್ತಿದೆ. 10 ತಂಡಗಳಿರೋ ಈ ಪಂದ್ಯಾಟದಲ್ಲಿ ಪ್ರತಿಯೊಂದು ತಂಡಕ್ಕೂ ಅಪಾರ ಅಭಿಮಾನಿ ಬಳಗವಿದೆ. ಇದೆಲ್ಲದರಲ್ಲೂ ಮುಂಚೂಣಿಯಲ್ಲಿರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ನಮ್ಮ ಬೆಂಗಳೂರಿನ RCB ತಂಡ ಪಡೆದಿರೋ ಅಭಿಮಾನಿಬಳಗಕ್ಕೆ ಸಾಟಿಯೇ ಇಲ್ಲ. ಸದ್ಯ ಈ RCB ತಂಡ ನಮ್ಮ ಕನ್ನಡದ ‘ಹೊಂಬಾಳೆ’ ಸಂಸ್ಥೆಯೊಂದಿಗೆ ಕೈಜೋಡಿಸುತ್ತಿದೆ.
ಹೊಂಬಾಳೆ ಸಂಸ್ಥೆಯವರು ಹೇಳುವಂತೆ ಇದೊಂದು ಮನರಂಜನೆಯ ಮಹಾಸಂಗಮ. ಹೊಂಬಾಳೆ ಪ್ರಪಂಚಾದಾದ್ಯಂತ ಪ್ರಖ್ಯಾತಿ ಪಡೆದ ನಿರ್ಮಾಣ ಸಂಸ್ಥೆ, RCB ಅತಿಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರೋ ತಂಡ. ಇವೆರಡು ದಿಗ್ಗಜರಿಗೆ ತವರು ನಮ್ಮ ಬೆಂಗಳೂರು. ಹಾಗಾಗಿ ಈ ಸಂಗಮ ಸ್ವಾಭಾವಿಕವೇ ಎನ್ನುತ್ತಾರೆ ಹೊಂಬಾಳೆ ಸಂಸ್ಥೆ. ‘ಬೆಂಗಳೂರಿನಲ್ಲಿ ಹುಟ್ಟಿ ದೇಶವನ್ನೇ ರಂಜಿಸಬಲ್ಲೆವು’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಎರಡು ಜನಪ್ರಿಯ ಸಂಸ್ಥೆಗಳ ಸಂಗಮ ಅಭಿಮಾನಿಗಳಲ್ಲಿ ಆನಂದ ಉಂಟುಮಾಡಿದೆ. ಇದರಿಂದ ಮುಂದೆ ತಮಗೆ ಸಿಗಲಿರೋ ಮನರಂಜನೆಗೆ ಕಾತುರದಿಂದ ಕಾಯುತ್ತಿದ್ದಾರೆ.