‘ಕೆಜಿಎಫ್’ ಈ ಹೆಸರು ಯಾರಿಗೇ ಗೊತ್ತಿಲ್ಲ? ನಾಡಿನ ಚಿನ್ನದ ಗಣಿ ಒಂದು ಕಡೆಯಾದರೆ, ನಾಡಿನ ಚಿತ್ರರಂಗಕ್ಕೇ ಚಿನ್ನದಂತ ಸಿನಿಮಾಗಳಾದ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ ಸರಣಿ ಇನ್ನೊಂದು ಕಡೆ. ಸದ್ಯ ಚಿತ್ರಮಂದಿರಗಳಲ್ಲಿ ತನ್ನ ರಾಜ್ಯಭಾರ ನಡೆಸಿ ಮುಗಿಸಿರುವ ‘ಕೆಜಿಎಫ್ ಚಾಪ್ಟರ್ 2’ ಒಟಿಟಿ ಪರದೆ ಮೇಲೆ ಸುದ್ದಿ ಮಾಡುತ್ತಿದೆ. ಇದೀಗ ‘ಕೆಜಿಎಫ್ ಚಾಪ್ಟರ್ 2’ ಕಿರುತೆರೆ ಪರದೆ ಮೇಲೆ ಬರಲು ಸಿದ್ಧವಾಗಿದೆ.
ಏಪ್ರಿಲ್ 14ರಂದು ಥೀಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಎಲ್ಲಾ ಧಾಖಲೆಗಳನ್ನು ಮುರಿದು ಯಶಸ್ಸಿನ ಶಿಖರದ ಮೇಲೆ ನಿಂತಿತ್ತು. ಸುಮಾರು ಸಾವಿರದ ಮುನ್ನೂರು ಕೋಟಿಯಷ್ಟು ಗಳಿಕೆ ಕಂಡಿದ್ದ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಸದ್ಯ ನೋಡಲು ಸಿಗುತ್ತಿದೆ. ಇದಷ್ಟೇ ಅಲ್ಲದೇ ಇದೀಗ ‘ಕೆಜಿಎಫ್ ಚಾಪ್ಟರ್ 2’ ಕಿರುತೆರೆಗೆ ಬರಲು ಸಿದ್ದವಾಗಿದ್ದು ಶೀಘ್ರದಲ್ಲೇ ‘ಜೀ ಕನ್ನಡ’ ವಾಹಿನಿಯಲ್ಲಿ ಬರುತ್ತಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದ್ದರೆ, ಜೀ ವಾಹಿನಿ ಸಾಟೆಲೈಟ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿತ್ತು. ದಿನಾಂಕ ಇನ್ನು ತಿಳಿಸದ ಜೀ ವಾಹಿನಿ, ವಿಡಿಯೋ ಒಂದರ ಮೂಲಕ ಆದಷ್ಟು ಬೇಗ ಸಿನಿಮಾ ‘ಜೀ ಕನ್ನಡ’ ವಾಹಿನಿಯಲ್ಲಿ ಬರಲಿದೆ ಎಂದು ಘೋಷಣೆ ಮಾಡಿದ್ದಾರೆ.