Karnataka Bhagya

‘ಪುಷ್ಪ’ ಕನ್ನಡ ವರ್ಷನ್ ನೋಡೋಕೆ ಬಂದವರ ಮೇಲೆ ದೌರ್ಜನ್ಯ; ತೆಲುಗು ನೋಡಿ ಎಂದು ಅವಾಜ್

‘ಪುಷ್ಪ’ ಸಿನಿಮಾ (Pushpa Movie) ಇಂದು (ಡಿಸೆಂಬರ್ 17) ರಿಲೀಸ್ ಆಗಿದೆ. ತೆಲುಗು ಮಾತ್ರವಲ್ಲದೆ, ಕನ್ನಡ, ಹಿಂದಿ, ತಮಿಳಿನಲ್ಲೂ ಸಿನಿಮಾ ಬಿಡುಗಡೆ ಆಗಿದೆ. ಬೇಸರದ ವಿಚಾರ ಎಂದರೆ, ಕನ್ನಡ ಅವತರಣಿಕೆಯಲ್ಲಿ ಈ ಸಿನಿಮಾ ಇಂದು ತೆರೆಕಾಣಲೇ ಇಲ್ಲ. ಕನ್ನಡ ವರ್ಷನ್ ಬಂದಿಲ್ಲ ಎನ್ನುವ ಮಾತು ಚಿತ್ರಮಂದಿರದವರ ಕಡೆಯಿಂದ ಬಂದಿದೆ. ಇದನ್ನು ಪ್ರಶ್ನೆ ಮಾಡಲು ಹೋದವರ ಮೇಲೆ ದೌರ್ಜನ್ಯ ನಡೆದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕೆಲವರು ಈ ಬಗ್ಗೆ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.

‘ಪುಷ್ಪ’ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿ ಇನ್ನುಳಿದ ಭಾಷೆಗಳಿಗೆ ಡಬ್​ ಆಗಿದೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ಆದರೆ ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್​ಗಿಂತಲೂ ತೆಲುಗು ವರ್ಷನ್​ ಅನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೊದಲು ಮೂರು ಕನ್ನಡ ಶೋಗಳನ್ನು ಆಯೋಜಿಸಲಾಗಿತ್ತು. ಆದರೆ, ಶುಕ್ರವಾರ (ಡಿಸೆಂಬರ್​ 17) ಈ ಸಂಖ್ಯೆ ಕೇವಲ ಒಂದಕ್ಕೆ ಇಳಿಕೆ ಆಗಿತ್ತು. ಈಗ ಅಲ್ಲಿಯೂ ಸಿನಿಮಾ ಪ್ರದರ್ಶನ ಕಂಡಿಲ್ಲ.

ಬೆಂಗಳೂರಿನ ಆವಲಹಳ್ಳಿಯ ವೆಂಕಟೇಶ್ವರದಲ್ಲಿ ಬೆಳಗ್ಗೆ 11 ಗಂಟೆಗೆ ಕನ್ನಡ ವರ್ಷನ್​ ರಿಲೀಸ್​ ಆಗಬೇಕಿತ್ತು. ಆದರೆ, ಕನ್ನಡದಲ್ಲಿ ‘ಪುಷ್ಪ’ ಸಿನಿಮಾ‌ ನೋಡೋಕೆ ಬಂದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಕನ್ನಡ ಅವತರಣಿಕೆ‌ ಬಂದಿಲ್ಲ ಎಂದು ಥಿಯೇಟರ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ‘ಪುಷ್ಪ’ದ ಕನ್ನಡ ವರ್ಷನ್​ ವೆಂಕಟೇಶ್ವರದಲ್ಲಿ ಮಾತ್ರ ಪ್ರದರ್ಶನ ನಿಗದಿ ಆಗಿತ್ತು. ಈಗ ಅಲ್ಲಿಯೂ ಶೋ ಇಲ್ಲದೇ ಇರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ‘ಕನ್ನಡ ವರ್ಷನ್​ ಬಂದಿಲ್ಲಾ ರೀ, ಬೇಕಿದ್ರೆ ತೆಲುಗು ನೋಡಿ ಎಂದು ಅವಾಜ್​ ಹಾಕಿದರು. ಮತ್ತೊಬ್ಬನಿಗೆ ಹೊಡೆದರು. ನನ್ನ ಕಾಲರ್​ ಪಟ್ಟಿ ಹಿಡಿದು ಇಲ್ಲಿಂದ ಸೈಲೆಂಟ್​ ಆಗಿ ಹೊರಟು ಹೋಗಿ, ಹಣ ಹಿಂದಿರುಗಿಸುತ್ತೇವೆ ಎಂದರು. ಇದು ಹಣದ ವಿಚಾರ ಅಲ್ಲ. ನಾವು ಕನ್ನಡದಲ್ಲಿ ಸಿನಿಮಾ ನೋಡೋಕೆ ಬಂದಿದ್ದೇವೆ. ಅದನ್ನು ತೋರಿಸಬೇಕಾಗಿದ್ದು ನಿಮ್ಮ ಧರ್ಮ’ ಎಂದು ಅಭಿಮಾನಿಯೊಬ್ಬರು ಸಿಟ್ಟಾಗಿದ್ದಾರೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap