Karnataka Bhagya

ಬರೋಬ್ಬರಿ 7 ವರ್ಷಗಳ ನಂತರ ನಿರ್ದೇಶನಕ್ಕಿಳಿಯಲಿರೋ ಉಪ್ಪಿ!!

ಕನ್ನಡದಲ್ಲಿ ತಲೆಗೆ ಹುಳ ಬಿಡೋ ಪ್ರಕ್ರಿಯೆಯ ಅತಿ ಪ್ರಬಲ ರಾಯಭಾರಿ ಅಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ ಅವರು. ಸಿನಿಮಾದಿಂದ ಸಿನಿಮಾಗೆ, ಕಥೆಯಿಂದ ಕಥೆಗೆ, ಅವರು ಹೇಳೋ ಬುದ್ಧಿವಾದಗಳ ಜೊತೆಗೆ ಅವರ ಚಿತ್ರದಲ್ಲಿನ ವಿಭಿನ್ನ-ವಿಶೇಷ ರೀತಿಯ ಅಂಶಗಳು ಅತಿ ರಭಸವಾಗಿ ಹರಿದಾಡಿ ಜನರ ಮನದಲ್ಲುಳಿಯುತ್ತವೆ. ಅವರ ನಟನೆಯ ಸಿನಿಮಾಗಳಿಗಿಂತ ಒಂದು ಪಾಲು ಹೆಚ್ಚೇ ಅವರ ನಿರ್ದೇಶನದ ಚಿತ್ರಗಳಿಗೆ ಅಭಿಮಾನಿ ಬಳಗವಿದೆ. ಈ ‘ಬುದ್ದಿವಂತ’ನ ಕೊನೆಯ ನಿರ್ದೇಶನ 2015ರ ‘ಉಪ್ಪಿ2’. ಇದೀಗ ಸುಮಾರು 7 ವರ್ಷಗಳ ನಂತರ ಮತ್ತೊಮ್ಮೆ ನಿರ್ದೇಶಕನ ಕುರ್ಚಿಯಲ್ಲಿ ಕೂರುತ್ತಾರಂತೆ ಉಪ್ಪಿ.

2021ರ ಸೆಪ್ಟೆಂಬರ್ ಆಸುಪಾಸಿನಲ್ಲಿ ಮೂರು ನಾಮಗಳುಳ್ಳ, ನಿರ್ದೇಶಕರ ಜಾಗದಲ್ಲಿ ಉಪ್ಪಿಯ ಹೆಸರಿದ್ದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ನೈಜವೋ ಇಲ್ಲ ಅಭಿಮಾನಿಗಳ ಅಭಿಮಾನದ ಚಿಹ್ನೆಯೋ ಯಾರಿಗೂ ತಿಳಿಯಲಿಲ್ಲ. ಸ್ವತಃ ಉಪೇಂದ್ರ ಅವರು ಕೂಡ ಈ ಬಗ್ಗೆ ಒಂದು ಮಾತನ್ನು ಆಡಿರಲಿಲ್ಲ. ಹಾಗಾಗಿಯೋ ಏನೋ ಆ ಪೋಸ್ಟರ್ ಸದ್ದಿಲ್ಲದೇ ಎಲ್ಲರ ನೆನಪಿನಿಂದ ಮಾಸಿ ಹೋಯಿತು. ಆದರೆ ಉಪ್ಪಿ ಮತ್ತೊಮ್ಮೆ ನಿರ್ದೇಶನ ಮಾಡಲಿದ್ದಾರೆ ಎಂಬ ಕಲ್ಪನೆಯೇ ಜನರಲ್ಲಿ ಹೊಸ ಹುರುಪೊಂದನ್ನು ತುಂಬುತ್ತದೆ.

ಅಂತದರಲ್ಲಿ ಈಗ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವರು ತಾನು ನಿರ್ದೇಶನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಇದೆ ಮಾರ್ಚ್ 11ನೆ ತಾರೀಕಿನ ಮಧ್ಯಾಹ್ನ 12:14ಕ್ಕೆ ಚಿತ್ರದ ಶೀರ್ಷಿಕೆಯನ್ನ ಜನರ ಮುಂದಿಡುವುದಾಗಿಯೂ ಹೇಳಿದ್ದಾರೆ. ಸದ್ಯ ಪ್ರೇಕ್ಷಕರೆಲ್ಲರೂ ಚಿತ್ರದ ಮುಂದಿನ ಮುಂದುವರೆದ ವಿಷಯಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಉಪೇಂದ್ರ ಅವರ ಬಿಡುಗಡೆಗಷ್ಟೇ ಬಾಕಿಯಿರುವ ಚಿತ್ರಗಳೇ ಹಲವಾರಿವೆ. ಈ ನಡುವೆ ಬಹಳ ಮೊದಲೇ ನಿರ್ದೇಶಕರಾದ ಶಶಾಂಕ್ ಅವರಿಗೆ ಉಪೇಂದ್ರ ಚಿತ್ರವೊಂದನ್ನು ಒಪ್ಪಿಕೊಂಡಿದ್ದರು. ಅದರ ಚಿತ್ರೀಕರಣ ಏಪ್ರಿಲ್ ಅಲ್ಲಿ ಸೆಟ್ಟೇರಲಿದೆ ಎಂದು ಶಶಾಂಕ್ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಉಪ್ಪಿ ನಿರ್ದೇಶನದ ಮುಂದಿನ ಚಿತ್ರ ಕೂಡ ಏಪ್ರಿಲ್ನಲ್ಲೆ ಸೆಟ್ಟೇರೋ ಸಾಧ್ಯತೆಗಳಿವೆಯಂತೆ. ಹಾಗಾದರೆ ಉಪ್ಪಿ ಒಮ್ಮೆಲೇ ಎರಡೆರಡು ಚಿತ್ರೀಕರಣಗಳಲ್ಲಿ ಬಣ್ಣ ಹಚ್ಚಬೇಕಾಗುತ್ತದೆ. ಉಪ್ಪಿ ನಿರ್ದೇಶನದ ಮುಂದಿನ ಚಿತ್ರದ ಯಾವುದೇ ಹೊಸ ವಿಷಯ ತಿಳಿದು ಸಂತೃಪ್ತರಾಗಬೇಕಾದರೆ, ಉಪ್ಪಿಯವರಿಗಾಗಿಯೇ ಕಾಯಬೇಕಾಗಿದೆ.

Leave a Comment

Your email address will not be published. Required fields are marked *

Scroll to Top
Share via
Copy link
Powered by Social Snap