ಕರ್ನಾಟಕ ಭಾಗ್ಯ ವಾರ್ತೆ
ಯಾದಗಿರಿ- ಜಗದ ಜೀವರಾಶಿಗಳನ್ನೆಲ್ಲ ರಕ್ಷಿಸುವ ಜಗದಂಬೆಯನ್ನು ಈ ಲೋಕದ ಜನರೆಲ್ಲ ಭಕ್ತಿಯಿಂದ ಭಜಿಸಬೇಕು ಎಂದು ಪೀಠಾಧಿಪತಿ ಡಾ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಭಾನುವಾರದಂದು ಶೀಗೆ ಹುಣ್ಣಿಮೆ ನಿಮಿತ್ತ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಅಂಬಾ ಭವಾನಿಯ ಪೂಜೆಯ ಮಂಗಲ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆದಿಶಕ್ತಿ ಮತ್ತು ಪರಾಶಕ್ತಿ ಆದ ದೇವಿ ಜಗದ ಜನರನ್ನು ಕಾಯುವ ಅದ್ಭುತವಾದ ಶಕ್ತಿಯನ್ನು ಹೊಂದಿದ್ದಾಳೆ. ಅಂತಹ ಶಕ್ತಿ ದೇವತೆಯನ್ನು ಮನುಜರೆಲ್ಲರೂ ಭಕ್ತಿ ಭಾವದಿಂದ ಅವಳನ್ನು ಭಜಿಸಬೇಕು. ಆಗ ದೇವಿ ಕರುಣೆಯನ್ನು ತೋರುತ್ತಾಳೆ ಎಂದು ಹೇಳಿದರು.
ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ ಕೆಲಸವನ್ನು ಮಹಾಮಾತೆ ಯಾವತ್ತೂ ಮಾಡುತ್ತಾ ಬಂದಿದ್ದಾಳೆ . ಪುರಾಣ ಕಾಲದಲ್ಲಿ ಮಧು ಕೈ ತವರು, ಚಿಕ್ಕಸುರ,ಚಂಡ ಮುಂಡ,ರಕ್ತ ಬೀಜಾಸುರ, ಶುಂಭ ನಿಶುಂಭ ಹೀಗೆ ಅನೇಕ ರಾಕ್ಷಸರನ್ನು ವಧೆ ಮಾಡಿ ದೇವಾನುದೇವತೆಗಳನ್ನು ಈ ಲೋಕದ ಜನತೆಯನ್ನು ಮಹಾಮಾತೆ ರಕ್ಷಿಸಿದ್ದಾಳೆ ಎಂದು ಹೇಳಿದರು.
ಭಕ್ತಿಯ ಆಚರಣೆಯನ್ನು ಎಲ್ಲರೂ ಶ್ರದ್ದೆ -ನಿಷ್ಠೆಯಿಂದ ಮಾಡಬೇಕು.ನಿಸ್ಕಾಮ ಭಕ್ತಿಗೆ ಖಂಡಿತವಾಗಿಯೂ ದೇವಿ ಒಲುಮೆಯನ್ನು ತೋರುತ್ತಾಳೆ ಎಂದು ಹೇಳಿದರು.
ಶ್ರೀ ವಿಶ್ವರಾಧ್ಯರು ದೇವಿಯ ಆರಾಧಕರಾಗಿದ್ದರು.ತಮ್ಮ ಕಠಿಣವಾದ ತಪಃ ಬಲದಿಂದ ದೇವಿಯನ್ನು ಒಲಿಸಿಕೊಂಡು ಅಣಿಮಾದಿ ಅಷ್ಟಸಿದ್ದಿಗಳನ್ನು ಸಂಪಾದಿಸಿಕೊಂಡ ಸಿದ್ದಿ ಪುರುಷರು ಅವರಾಗಿದ್ದರು. ಅಂತಹ ಮಹಾತ್ಮನ ಕ್ಷೇತ್ರದಲ್ಲಿ ದೇವಿ ಯಾವತ್ತೂ ಜಾಗೃತವಾಗಿದ್ದಾಳೆಂದು ಹೇಳಿದರು.
ಬೆಳಿಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಶ್ರೀಮಠದಲ್ಲಿರುವ ಭವಾನಿ ಮೂರ್ತಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿಯನ್ನು ಬಸವರಾಜ್ ಶಾಸ್ತ್ರಿ ಎಲೆಕೂಡ್ಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಡಾ. ಸುಭಾಷ್ ಚಂದ್ರ ಕೌಲಗಿ, ವೆಂಕಟರಡ್ಡಿ ಗೌಡ ಮಾ.ಪಾ ಅಬ್ಬೆ ತುಮಕೂರು ಸೇರಿದಂತೆ ಸಹಸ್ರಾರು ಭಕ್ತರು ಇದ್ದರು.
ಪಿ ಡಬ್ಲ್ಯೂ ಸಿ ಫೌಂಡೇಶನ್ ವತಿಯಿಂದ ಭಾನುವಾರದಂದು ತಾಲೂಕಿನ ಶ್ರೀ ವಿಶ್ವರಾಧ್ಯರ ಸಿದ್ಧ ಸಂಸ್ಥಾನ ಮಠದಲ್ಲಿ 44 ಜನ ಬುಡಕಟ್ಟು ಜನಾಂಗದ ಹಿಂದುಳಿದ ಮಕ್ಕಳಿಗೆ ಸೈಕಲ್ ಗಳನ್ನು ವಿತರಿಸಲಾಯಿತು.
ಸೈಕಲ್ ಗಳನ್ನು ವಿತರಿಸಿ ಪೀಠಾಧಿಪತಿ ಡಾ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಬುಡಕಟ್ಟು ಮತ್ತು ಹಿಂದುಳಿದ ಮಕ್ಕಳಿಗೆ ಸೈಕಲ್ ಗಳನ್ನು ವಿತರಿಸುವ ಪುಣ್ಯ ಕಾರ್ಯ ಮಾಡಿದ ಸಂಸ್ಥೆಯವರ ಕೆಲಸವನ್ನು ಶ್ಲಾಘಿಸಿ, ಸೈಕಲ್ ಗಳನ್ನು ಪಡೆದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಒಳ್ಳೆಯ ನಾಗರಿಕರಾಗುವಂತೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮಾಶಂಕರ್ ಮೇಟಿ, ಗಂಗಾಧರ ನಾಯಕ ತಿಂಥಣಿ,ಪ್ರಾಂತ ಶಿಕ್ಷಣ ಪ್ರಮುಖ ರಾಮಚಂದ್ರ, ರಾಘವೇಂದ್ರ ಯಕ್ಚಿಂತಿ, ಪರಮಣ್ಣ ವಡಕೇರ,ಕಾಶಪ್ಪ, ರಾಜಾ ಪಿಡ್ಡ ನಾಯಕ್, ಶಿವರಾಜ್ ನಾಯಕ್ ಸೇರಿದಂತೆ ಇತರರು ಇದ್ದರು.

